ಪ್ರಧಾನಿ ನಿವಾಸಕ್ಕೆಂದು 10 ಕಟ್ಟಡ ನಿರ್ಮಾಣ| ಪ್ರತಿ ಕಟ್ಟಡದಲ್ಲೂ 4 ಅಂತಸ್ತು| ಸೆಂಟ್ರಲ್‌ ವಿಸ್ತಾ ಯೋಜನೆ

ನವದೆಹಲಿ(ಡಿ.19): ಹೊಸ ಸಂಸತ್ತಿನ ನಿರ್ಮಾಣ ಸೇರಿದಂತೆ 3 ಕಿ.ಮೀ. ಉದ್ದದ ರಾಜಪಥವನ್ನು ಮರುವಿನ್ಯಾಸಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೆಂಟ್ರಲ್‌ ವಿಸ್ತಾ ಮರುಅಭಿವೃದ್ಧಿ ಯೋಜನೆಯಡಿ ಪ್ರಧಾನಮಂತ್ರಿಗಳ ವಸತಿ ಸಂಕೀರ್ಣ ವ್ಯಾಪ್ತಿಯಲ್ಲಿ 10 ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ತಲಾ 12 ಮೀಟರ್‌ ಎತ್ತರವಿರುವ ಈ ಕಟ್ಟಡಗಳು 4 ಅಂತಸ್ತನ್ನು ಹೊಂದಿರಲಿವೆ.

15 ಎಕರೆ ಜಾಗದಲ್ಲಿ ಪ್ರಧಾನಿ ನಿವಾಸವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಪ್ರಧಾನಮಂತ್ರಿಗಳ ಭದ್ರತೆ ಮೀಸಲಾಗಿರುವ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ)ಗಾಗಿ 2.50 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ.

ಅರಣ್ಯ ಮತ್ತು ಪರಿಸರ ಸಚಿವಾಲಯದ ಪರಿಣತರ ಸಮಿತಿ ಮುಂದೆ ಮಂಡಿಸಿದ ಸೆಂಟ್ರಲ್‌ ವಿಸ್ತಾ ಮರು ಅಭಿವೃದ್ಧಿ ಯೋಜನೆಯಲ್ಲಿ ಪ್ರಧಾನಿ ನಿವಾಸಕ್ಕೆ 10 ಕಟ್ಟಡ ನಿರ್ಮಿಸುವ ಪ್ರಸ್ತಾವ ಇರಲಿಲ್ಲ. ಆದರೆ ಕೇಂದ್ರೀಯ ಲೋಕೋಪಯೋಗಿ ಇಲಾಖೆ ಇದನ್ನು ಈಗ ಸೇರ್ಪಡೆ ಮಾಡಿದೆ. ಇದರಿಂದಾಗಿ ಸೆಂಟ್ರಲ್‌ ವಿಸ್ತಾ ಮರು ಅಭಿವೃದ್ಧಿ ಯೋಜನೆ ವೆಚ್ಚ 11794 ಕೋಟಿ ರು.ಗಳಿಂದ 13450 ಕೋಟಿ ರು.ಗೆ ಹೆಚ್ಚಳವಾಗಲಿದೆ.