'ಎಲ್‌ಎಸಿಗೆ ಸೇನೆಯನ್ನು ಕಳಿಸಿದ್ದು ಮೋದಿ, ರಾಹುಲ್‌ ಗಾಂಧಿ ಅಲ್ವಲ್ಲ..' ಕಾಂಗ್ರೆಸ್‌ ನಾಯಕನಿಗೆ ಜೈಶಂಕರ್‌ ತಿರುಗೇಟು!

ಭಾರತ-ಚೀನಾ ಗಡಿ ವಿವಾದದ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌, ಗಡಿ ವಿವಾದದ ಕುರಿತಾಗಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಸಂದರ್ಶನವೊಂದರಲ್ಲಿ ತಿರುಗೇಟು ನೀಡಿದ್ದಾರೆ.
 

PM Narendra Modi sent army on LAC S Jaishankar on Rahul Gandhi san

ನವದೆಹಲಿ (ಡಿ.21): ಭಾರತ ಹಾಗೂ ಚೀನಾ ಗಡಿ ವಿವಾದದ ಕುರಿತಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಕಿಡಿಕಾರಿದ್ದಾರೆ. ಭಾರತ ಹಾಗೂ ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನತೆ ಬಗ್ಗೆ ರಾಹುಲ್‌ ಗಾಂಧಿ ಬಹಳ ತಪ್ಪು ಕಲ್ಪನೆಗಳನ್ನು ಅವರು ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿ ಸಂದರ್ಶನದಲ್ಲಿ ಈ ಕುರಿತಾಗಿ ಮಾತನಾಡಿದ ಜೈಶಂಕರ್,‌ ಭಾರತ ಸರ್ಕಾರವು ಚೀನಾಕ್ಕೆ ಹೆದರುತ್ತಿದೆ ಎನ್ನುವ ನಿರೂಪಣೆಯನ್ನು ರಾಹುಲ್‌ ಗಾಂಧಿ ಹರಡುತ್ತಿದ್ದಾರೆ. ಹಾಗಾದರೆ ಭಾರತೀಯ ಸೇನೆಯನ್ನು ಎಲ್‌ಎಸಿಗೆ ಕಳುಹಿಸಿದ್ದು ಯಾರು? ಅವರು ಯಾರೂ ಕೂಡ ರಾಹುಲ್‌ ಗಾಂಧಿ ಹೇಳಿದ್ದಕ್ಕಾಗಿ ಗಡಿಗೆ ಹೋಗಿಲ್ಲ. ಪ್ರಧಾನಿ ಸ್ಥಾನದಲ್ಲಿರುವ ಮೋದಿಯರ ಸೂಚನೆಯಂತೆ ಗಡಿಗೆ ಹೋಗಿದ್ದಾರೆ. ಈ ವಿಚಾರದಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ ಅನ್ನೋದನ್ನು ನೀವು ಅವರಲ್ಲಿಯೇ ಕೇಳಬೇಕು ಎಂದು ಜೈಶಂಕರ್‌ ಹೇಳಿದ್ದಾರೆ. ಕಾಂಗ್ರೆಸ್‌ ಅನ್ನು ಹ್ಯಾಂಡಲ್‌ ಮಾಡಲು ರಾಹುಲ್‌ ಗಾಂಧಿ ಒದ್ದಾಡುತ್ತಿದ್ದಾರೆ ಎನ್ನುವ ಅಂಶವನ್ನು ಉದ್ದೇಶಿಸಿ ವ್ಯಂಗ್ಯವಾಡಿದ ಜೈಶಂಕರ್‌, ಬಹುಶಃ ರಾಹುಲ್‌ ಗಾಂಧಿಯವರಿಗೆ ಇಂಗ್ಲೀಷ್‌ನ 'ಸಿ' ಅಕ್ಷರದಿಂದ ಪ್ರಾರಂಭವಾಗುವ ಎಲ್ಲಾ ವಿಚಾರವನ್ನೂ ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವಾಗುತ್ತಿದೆ. ಕೆಲವೊಂದು ವಿಚಾರವನ್ನು ಅವರು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗಡಿ ಭಾಗದಲ್ಲಿ ಮೂಲಸೌಕರ್ಯ ವೃದ್ಧಿಗೆ ಸರ್ಕಾರ ಗಂಭೀರವಾಗಿ ಕೆಲಸ ಮಾಡುತ್ತಿದೆ ಎಂದೂ ಜೈಶಂಕರ್‌ ಹೇಳಿದ್ದಾರೆ.

ಚೀನಾ ವಿಚಾರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಿರಂತರವಾಗಿ ಮೋದಿ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಭಾರತ ಸರ್ಕಾರ, ಚೀನಾದ ಹೆಸರನ್ನು ತೆಗೆದುಕೊಳ್ಳಲು ಕೂಡ ಹೆದರುತ್ತಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ರೀತಿಯಲ್ಲಿ ಎಸ್‌ ಜೈಶಂಕರ್‌ ಮಾತನಾಡಿದ್ದಾರೆ.

ರಾಹುಲ್‌ ಗಾಂಧಿಯಿಂದ ಕಲಿಯಲು ಸಿದ್ಧ: ಇದೇ ವೇಳೆ ರಾಹುಲ್‌ ಗಾಂಧಿಯಿಂದ ಕಲಿಯಲು ತಾವು ಸಿದ್ಧ ಎಂದೂ ಜೈಶಂಕರ್‌ ಹೇಳಿದ್ದಾರೆ. ನಾನು ಬಹಳ ದೀರ್ಘಕಾಲದವರರೆಗೆ ಚೀನಾಗೆ ಭಾರತದ ರಾಯಭಾರಿಯಾಗಿದ್ದೆ. ಈ ವೇಳೆಯೂ ನಾನು ಗಡಿ ವಿವಾದ ವಿಚಾರವನ್ನು ಎದುರಿಸಿದ್ದೆ. ನಾನು ಈ ವಿಚಾರದಲ್ಲಿ ಬಹಳ ಜ್ಞಾನವನ್ನು ಹೊಂದಿದ್ದೇನೆ ಎಂದು ಹೇಳುತ್ತಿಲ್ಲ. ಆದರೆ, ಚೀನಾದ ವಿಚಾರವಾಗಿ ನನಗೆ ಬಹಳಷ್ಟು ವಿಚಾರ ತಿಳಿದಿದೆ. ಚೀನಾದ ಬಗ್ಗೆ ರಾಹುಲ್‌ ಗಾಂಧಿಯವರ ಬಳಿ ಜ್ಞಾನವಿದ್ದರೆ, ಅದನ್ನು ಕಲಿಯಲು ನಾನೂ ಸಿದ್ಧ. ಭಾರತದ ಹೊರಗಿರುವ ಸಿದ್ಧಾಂತ ಮತ್ತು ರಾಜಕೀಯ ಪಕ್ಷಗಳು, ಇದೇ ರೀತಿಯ ಸಿದ್ಧಾಂತಗಳು ಮತ್ತು ಪಕ್ಷಗಳು ಭಾರತದೊಳಗೂ ಇವೆ ಮತ್ತು ಎರಡೂ ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದು ಅರ್ಥಮಾಡಿಕೊಳ್ಳುವುದು ನನಗೆ ಬಹಳ ಕಷ್ಟವಾಗುತ್ತಿದೆ ಎಂದಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು: ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವಿನ ಘರ್ಷಣೆಯ ವಿಚಾರವಾಗಿ ಮಾತನಾಡಿದ್ದ ರಾಹುಲ್ ಗಾಂಧಿ, ಚೀನಾ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದರು. ನರೇಂದ್ರ ಮೋದಿಯಾಗಲಿ, ಕೇಂದ್ರ ಸರ್ಕಾರವಾಗಲಿ ಈ ಬಗ್ಗೆ ಗಂಭೀರವಾಗಿಲ್ಲ. ಈ ವಿಚಾರವಾಗಿ ಸಂಸತ್ತಿನಲ್ಲಿ ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಕೆಲಸವನ್ನೂ ಸರ್ಕಾರ ಮಾಡಿಲ್ಲ. ಚೀನಾ ವಿಚಾರದಲ್ಲಿ ಚರ್ಚೆ ಮಾಡುವುದರಿಂದ ಕೇಂದ್ರ ಸರ್ಕಾರ ಓಡಿ ಹೋಗುತ್ತಿದೆ ಎಂದು ಆರೋಪಿಸಿದ್ದರು.

Latest Videos
Follow Us:
Download App:
  • android
  • ios