ನವದೆಹಲಿ(ಜೂ.21): ದೇಶದಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಹೀಗಿರುವಾಗ ಈ ಬಾರಿ ಸಾರ್ವಜನಿಕವಾಗಿ ಯೋಗ ದಿನಾಚರಣೆ ಆಚರಿಸದಿರಲು ಸರ್ಕಾರ ನಿರ್ಧರಿಸಿದ್ದು, ಜನರಿಗೆ ತಮ್ಮ ತಮ್ಮ ಮನೆಯಲ್ಲೇ ಕುಟುಂಬ ಸದಸ್ಯರೊಂದಿಗೆ ಸೇರಿ ಯೋಗ ಮಾಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

"

6ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ದೇಶವನ್ನುದ್ದೇಶಿಸಿ, ಇಂದು ಭಾನುವಾರ ಬೆಳಗ್ಗೆ 06.30ಕ್ಕೆ ಭಾಷಣ ಮಾಡಿದ ಪಿಎಂ ಮೋದಿ ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ನಿಮ್ಮ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಯೋಗ ಮಾಡಿ. ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಕೊರೋನಾ ವಿರುದ್ಧ ಹೋರಾಟ ಮಾಡಬಹುದು ಎಂದಿದ್ದಾರೆ.

 ಅಲ್ಲದೇ  'ಆರೋಗ್ಯ ವೃದ್ಧಿಗೆ ಯೋಗ ಬಹು ಮುಖ್ಯ. ದೈಹಿಕ ಹಾಗೂ ಮಾನಸಿಕ ಸದೃಢತೆಯ ಸಮಾಜ ನಿರ್ಮಾಣಕ್ಕೆ ಯೋಗ ಅತೀ ಅವಶ್ಯಕ. ಮಾರಕ ಕೊರೋನಾ ವೈರಸ್ ಓಡಿಸಲು ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

ಯೋದಿಂದಾಗುವ ಉಪಯೋಗಗಳ ಕುರಿತು ಮಾತನಾಡಿದ ಪಿಎಂ ಮೋದಿ ಯೋಗ ಉಸಿರಾಟ ವ್ಯವಸ್ಥೆಗೆ ಬಲ ನೀಡುತ್ತದೆ. ಹೀಗಾಗಿ ಪ್ರತಿನಿತ್ಯ ಯೋಗ ಮಾಡಿ ಎಂದು ನಾನು ಆಗ್ರಹಿಸುತ್ತೇನೆ. ಯೋಗದಿಂದ ಜೀವನದಲ್ಲಿ ಯೋಗ್ಯತೆ ಹೆಚ್ಚುತ್ತದೆ. ಜೊತೆಗೆ ಕೆಲಸಗಳನ್ನ ಶಿಸ್ತುಬದ್ಧವಾಗಿ ಮಾಡುವುದೇ ಯೋಗವಾಗಿದೆ. ನಿಯಮಬದ್ಧವಾಗಿ ಕೆಲಸ ಮಾಡುವುದು ಕೂಡ ಯೋಗ ಎಂದು ತಿಳಿಸಿದ್ದಾರೆ.

ಯೋಗಾಭ್ಯಾಸದಿಂದ ಸಂಕಷ್ಟವನ್ನು ಎದುರಿಸಿ ಗೆಲ್ಲುವ ಛಲ ಬರುತ್ತದೆ. ಯೋಗ ಕೇವಲ ದೈಹಿಕ ಶಕ್ತಿಗಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯದ ಬೆಳವಣಿಗೆಗೂ ಪರಿಣಾಮಕಾರಿ. ಹೀಗಾಗಿ ಯೋಗದ ಮಹತ್ವವನ್ನು ಇಡೀ ವಿಶ್ವ ಅರಿತಿರುವುದು ನನಗೆ ತುಂಬ ಸಂತಸದ ವಿಷಯವಾಗಿದೆ ಎಂದರು.