ನಾಳೆ ಕೇಂದ್ರ ಸಂಪುಟ ವಿಸ್ತರಣೆ? ಹೊಸಮುಖ, ಟೆಕ್ನೋಕ್ರಾಟ್‌ಗಳಿಗೆ ಸ್ಥಾನ?
* 20ರಿಂದ 22 ಮಂದಿಗೆ ಸಂಪುಟದಲ್ಲಿ ಸ್ಥಾನ ಸಾಧ್ಯತೆ
* ನಾಳೆ ಕೇಂದ್ರ ಸಂಪುಟ ವಿಸ್ತರಣೆ?
* ಹೊಸಮುಖ, ಟೆಕ್ನೋಕ್ರಾಟ್‌ಗಳಿಗೆ ಮೋದಿ ಮನ್ನಣೆ?
ನವದೆಹಲಿ(ಜು.06): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ಇಲ್ಲವೇ ಈ ವಾರದ ಒಳಗಾಗಿ ನಡೆಯುವ ಸಾಧ್ಯತೆ ಇದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ 52 ಮಂದಿ ಸದಸ್ಯರಿದ್ದಾರೆ. ಗರಿಷ್ಠ 81 ಮಂದಿ ಸಚಿವರನ್ನು ಹೊಂದುವುದಕ್ಕೆ ಅವಕಾಶ ಇದೆ. ಆಡಳಿತದ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಿಂದ 20ರಿಂದ 22 ಸದಸ್ಯರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಕರ್ನಾಟಕಕ್ಕೂ ಒಂದರಿಂದ ಎರಡು ಸ್ಥಾನ ಲಭ್ಯವಾಗುವ ನಿರೀಕ್ಷೆ ಇದೆ.
ಇದೇ ವೇಳೆ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಜೆಡಿಯು ಹಾಗೂ ಎಲ್‌ಜೆಪಿಗೂ ಮಣೆ ಹಾಕುವ ಸಾಧ್ಯತೆ ಇದೆ. ಎರಡು ಹಂತದಲ್ಲಿ ಸಂಪುಟ ವಿಸ್ತರಣೆಗೆ ಯೋಜಿಸಲಾಗಿದ್ದು, ಮುಂಗಾರು ಅಧಿವೇಶನದ ಬಳಿಕ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
"
ಯಾರಿಗೆಲ್ಲಾ ಮಣೆ?:
ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಾಗಿನಿಂದಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜ್ಯೋತಿರಾದಿತ್ಯ ಸಿಂಧಿಯಾ, ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರಬಾನಂದ ಸೋನೋವಾಲ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಜೊತೆಗೆ ಬಿಜಾರ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ಲಡಾಖ್ ಸಂಸದ ಜಮ್ಯಾಂಗ್ ನ್ಯಾಮ್‌ಗೆಲ್, ಆಪ್ನಾದಳದ ನಾಯಕಿ ಅನುಪ್ರಿಯಾ ಪಟೇಲ್ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆ ದಟ್ಟವಾಗಿದೆ.
ಹೆಚ್ಚುವರಿ ಖಾತೆ ತೆರವು:
ಇದೇ ವೇಳೆ ಹಲವು ಸಚಿವರು ಹೆಚ್ಚುವರಿ ಖಾತೆಗಳನ್ನು ನಿಭಾಯಿಸುತ್ತಿದ್ದು, ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಹೊಸ ಮುಖಗಳಿಗೆ ಅದ್ಯತೆ ನೀಡಬಹುದು ಎನ್ನಲಾಗಿದೆ.