Asianet Suvarna News Asianet Suvarna News

'ಭಯೋತ್ಪಾದನೆ ಕೇಸಲ್ಲಿ ಜೈಲು ಸೇರಿದವರ ಫೋಟೋ ತೋರಿಸ್ತಾರೆ, ಏನಿದರ ಅರ್ಥ?'

ರೈತಾಂದೋಲನ ಪವಿತ್ರ, ಆದರೆ ಆಂದೋಲನ ಜೀವಿಗಳೇ ಕಂಟಕ| ಹೋರಾಟ ಬಿಡಿ, ಚರ್ಚೆಗೆ ಬನ್ನಿ: ರೈತರಿಗೆ ಮೋದಿ ಕರೆ| ಭಯೋತ್ಪಾದನೆ ಕೇಸಲ್ಲಿ ಜೈಲು ಸೇರಿದವರ ಫೋಟೋ ತೋರಿಸ್ತಾರೆ, ಏನಿದರ ಅರ್ಥ?| ಹೊಸ ಕೃಷಿ ಕಾಯ್ದೆಗಳ ಜಾರಿ ನಂತರ ಎಂಎಸ್‌ಪಿ ಹೆಚ್ಚಿದೆ, ಎಪಿಎಂಸಿಯೂ ಮುಚ್ಚಿಲ್ಲ| ಪ್ರತಿಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ

PM Narendra Modi invites protesting farmers for talks on agri laws pod
Author
Bangalore, First Published Feb 11, 2021, 7:23 AM IST

ನವದೆಹಲಿ(ಫೆ.11): ‘ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ 3 ತಿಂಗಳಿನಿಂದ ನಡೆಯುತ್ತಿರುವ ರೈತ ಆಂದೋಲನಗಳು ಪವಿತ್ರವಾದದು. ಆದರೆ ‘ಆಂದೋಲನ ಜೀವಿಗಳು’ ಅದನ್ನು ಹೈಜಾಕ್‌ ಮಾಡುವ ಮೂಲಕ ಕಂಟಕಪ್ರಾಯರಾಗಿ ಹೊರಹೊಮ್ಮಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಅಲ್ಲದೆ ‘ಹೊಸ ಕಾಯ್ದೆಗಳ ಜಾರಿಯ ಹೊರತಾಗಿಯೂ, ಹಾಲಿ ಜಾರಿಯಲ್ಲಿರುವ ಕೃಷಿ ಮಾರುಕಟ್ಟೆ(ಎಪಿಎಂಸಿ) ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಮುಂದುವರೆಯಲಿವೆ. ರೈತರು ತಮಗೆ ಯಾವ ವ್ಯವಸ್ಥೆ ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿರಲಿದ್ದಾರೆ. ಕಾಯ್ದೆಯಲ್ಲಿ ಲೋಪವಿದ್ದರೆ ಸರಿ ಮಾಡುತ್ತೇವೆ. ಹೀಗಾಗಿ ರೈತರು ಪ್ರತಿಭಟನೆ ಹಾದಿ ಕೈಬಿಟ್ಟು ಮತ್ತೆ ಮಾತುಕತೆಯ ವೇದಿಕೆಗೆ ಬರಬೇಕು’ ಎಂದು ಕರೆಕೊಟ್ಟಿದ್ದಾರೆ.

"

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಬುಧವಾರ ಲೋಕಸಭೆಯಲ್ಲಿ 90 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದ ಪ್ರಧಾನಿ, ಮೂರೂ ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡರು. ದೇಶದ ಕೃಷಿ ವಲಯದ ಆಧುನೀಕರಣ, ಕೃಷಿ ವಲಯದಲ್ಲಿ ಬಂಡವಾಳ ಆಹ್ವಾನ, ಆತ್ಮನಿರ್ಭರ ರೈತಾಪಿ ವಲಯ ಸೃಷ್ಟಿಗೆ ಇಂಥ ಕಾಯ್ದೆಗಳು ಅನಿವಾರ್ಯ ಎಂದು ಪ್ರತಿಪಾದಿಸಿದರು.

‘ಕೃಷಿ ಕಾಯ್ದೆ ವಿಷಯದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ. ಸತ್ಯದರ್ಶನವನ್ನು ಅರಗಿಸಿಕೊಳ್ಳಲಾಗದ ಅವು ಯೋಜಿತ ರೀತಿಯಲ್ಲಿ ಸಂಸತ್‌ ಕಲಾಪಕ್ಕೆ ಅಡ್ಡಿ ಮಾಡುತ್ತಿವೆ. ಕಾಂಗ್ರೆಸ್‌ ಅಂತೂ ವಿಭಜಿತ ಮತ್ತು ಗೊಂದಲಮಯ ಪಕ್ಷವಾಗಿ ಹೊರಹೊಮ್ಮಿದ್ದು, ಕಾಯ್ದೆ ವಿಷಯದಲ್ಲಿ ಅದು ಲೋಕಸಭೆಯಲ್ಲೊಂದು, ರಾಜ್ಯಸಭೆಯಲ್ಲೊಂದು ನಿರ್ಧಾರ ತೆಗೆದುಕೊಳ್ಳುತ್ತಿದೆ’ ಎಂದು ವ್ಯಂಗ್ಯವಾಡಿದರು. ಈ ವೇಳೆ ಸಭಾತ್ಯಾಗ ಮಾಡಿದ ಕಾಂಗ್ರೆಸ್‌ಗೆ ‘ರೈತರ ಹಾದಿ ತಪ್ಪಿಸಬೇಡಿ’ ಎಂದು ಚಾಟಿ ಬೀಸಿದರು.

ಸಮರ್ಥನೆ:

ಭಾಷಣದ ವೇಳೆ ಮೋದಿ ಮೂರು ಕೃಷಿ ಕಾಯ್ದೆ ಅಂಗೀಕಾರದ ಅಗತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ‘ಕೃಷಿ ವಲಯಕ್ಕೆ ಯಾವ ಪ್ರಮಾಣದ ಬಂಡವಾಳ ಹೂಡಿಕೆಯಾಗಬೇಕಿತ್ತೋ ಅದು ಆಗಿಲ್ಲ. ಹೀಗಾಗಿ ಕೃಷಿ ವಲಯ ಸಬಲೀಕರಣಕ್ಕೆ ಅಲ್ಲಿಗೆ ಬಂಡವಾಳ ಆಹ್ವಾನ ಅಗತ್ಯ. ರೈತರು ತಮ್ಮ ಕಾಲಮೇಲೆ ತಾವು ನಿಲ್ಲುವಂತಾಗಬೇಕು. ಆತನಿಗೆ ತನ್ನ ಉತ್ಪನ್ನಗಳನ್ನು ಬೇಕಾದವರಿಗೆ ಮಾರಾಟ ಮಾಡುವ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ನಾವು ಮುಂದೆ ಸಾಗುವ ಅವಶ್ಯಕತೆ ಇದೆ. ಈ ಕಾರಣಕ್ಕಾಗಿಯೇ ಸರ್ಕಾರ 3 ಕಾಯ್ದೆ ಜಾರಿಗೆ ತಂದಿದೆ. ಆದರೆ ಕಾಯ್ದೆ ಜಾರಿಗೆ ಬಂದ ಬಳಿಕ ಎಲ್ಲಿಯೂ ಕೃಷಿ ಮಂಡಿ ಮುಚ್ಚಿಲ್ಲ, ಕನಿಷ್ಠ ಬೆಂಬಲ ಬೆಲೆ ನೀತಿ ರದ್ದಾಗಿಲ್ಲ. ಈ ಸತ್ಯವನ್ನು ನಿಮಗೆ ನಿರಾಕರಿಸಲು ಆಗುತ್ತಿಲ್ಲ’ ಎಂದು ವಿಪಕ್ಷಗಳನ್ನು ತಿವಿದರು.

ಪವಿತ್ರ ಆಂದೋಲನ:

‘ರೈತ ಹೋರಾಟಕ್ಕೆ ಮತೀಯ, ಪ್ರಾಂತೀಯ ಬಣ್ಣ ಬಳಿಯುವ ಯತ್ನ ತಪ್ಪು’ ಎಂದು ರಾಜ್ಯಸಭೆಯಲ್ಲಿ ತಾವು ಆಡಿದ್ದ ಮಾತುಗಳನ್ನು ಪುನರುಚ್ಚರಿಸಿರುವ ಪ್ರಧಾನಿ, ‘ಕೃಷಿ ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ಆಕ್ಷೇಪ ಎತ್ತಿದ ರೈತರ ಭಾವನೆಗಳನ್ನು ಈ ಸದನ, ಸರ್ಕಾರ ಮತ್ತು ಸಂಸತ್‌ ಗೌರವಿಸುತ್ತದೆ. ಈ ಕಾರಣಕ್ಕಾಗಿಯೇ ಆಕ್ಷೇಪಕ್ಕೆ ಕಾರಣವಾದ ಒಂದೊಂದು ಅಂಶಗಳ ಬಗ್ಗೆಯೂ ಪ್ರತ್ಯೇಕ ಚರ್ಚೆಗೆ ನಾವು ಅವಕಾಶ ಕಲ್ಪಿಸಿದ್ದು ಮತ್ತು ಕಾಯ್ದೆಯಲ್ಲಿನ ಯಾವುದೇ ಲೋಪಗಳನ್ನು ಸರಿಪಡಿಸಲು ನಾವು ಸಿದ್ಧ ಎಂಬ ಭರವಸೆ ನೀಡಿದ್ದೇವೆ’ ಎಂದರು.

‘ಸರ್ಕಾರದ ಹಿರಿಯ ಸಚಿವರೇ ಮುಂದೆ ನಿಂತು ಮಾತುಕತೆ ನಡೆಸಿದ್ದಾರೆ. ರೈತ ಆಂದೋಲನ ಪವಿತ್ರವಾದುದು. ಆದರೆ ಆಂದೋಲನ ಜೀವಿಗಳು ಅದನ್ನು ಹೈಜಾಕ್‌ ಮಾಡುವ ಮೂಲಕ ಮಾತುಕತೆಗೆ ಕಂಟಕಪ್ರಾಯರಾಗಿ ಹೊರಹೊಮ್ಮಿದ್ದಾರೆ. ಇಂಥ ಆಂದೋಲನ ಜೀವಿಗಳು ಭಯೋತ್ಪಾದನೆ ಪ್ರಕರಣದಲ್ಲಿ ಜೈಲು ಸೇರಿದವರ ಫೋಟೋಗಳನ್ನು ತೋರಿಸುತ್ತಿದ್ದಾರೆ. ಇದು ಯಾವ ಉದ್ದೇಶವನ್ನು ಸಾಧಿಸುತ್ತದೆ?’ ಎಂದು ಪ್ರಶ್ನಿಸಿದ ಪ್ರಧಾನಿ, ‘ಹೀಗಾಗಿಯೇ ಪ್ರತಿಭಟನೆ ಕೈಬಿಟ್ಟು, ಮಾತುಕತೆಯ ವೇದಿಕೆಗೆ ಬನ್ನಿ ಎಂದು ನಾನು ನಿಮ್ಮನ್ನು ಮತ್ತೊಮ್ಮೆ ಕೋರುತ್ತೇನೆ’ ಎಂದು ಪ್ರಧಾನಿ ಮನವಿ ಮಾಡಿದರು.

ಖಾಸಗಿ ಪಾಲುದಾರಿಕೆ ಅಗತ್ಯ:

ಕೃಷಿ ವಲಯದಲ್ಲೂ ಖಾಸಗಿ ಭಾಗಿದಾರಿಕೆಯನ್ನು ಸಮರ್ಥಿಸಿಕೊಂಡ ಪ್ರಧಾನಿ, ‘ಸಾರ್ವಜನಿಕ ವಲಯದಂತೆ ಖಾಸಗಿ ವಲಯದ ಭಾಗೀದಾರಿಕೆ ಕೂಡಾ ಅತ್ಯಗತ್ಯ. ಅದು ಟೆಲಿಕಾಂ ವಲಯವಾಗಿರಬಹುದು ಅಥವಾ ಔಷಧ ಉದ್ಯಮವಾಗಿರಬಹುದು. ಖಾಸಗಿ ವಲಯ ವಹಿಸಿರುವ ಪ್ರಮುಖ ಪಾತ್ರವನ್ನು ನಾವು ಕಾಣಬಹುದು’ ಎಂದು ಹೇಳಿದರು.

ಫೆ.18ಕ್ಕೆ ದೇಶಾದ್ಯಂತ ರೈತರಿಂದ ರೈಲು ತಡೆ

ನವದೆಹಲಿ: ಕೃಷಿ ಕಾಯ್ದೆಗಳ ಹಿಂಪಡೆತಕ್ಕೆ ಒತ್ತಾಯಿಸಿ ಇತ್ತೀಚೆಗೆ ದೇಶಾದ್ಯಂತ ಚಕ್ಕಾ ಜಾಮ್‌ (ಹೆದ್ದಾರಿ ತಡೆ) ಪ್ರತಿಭಟನೆ ನಡೆಸಿದ್ದ ರೈತ ಸಂಘಟನೆಗಳು ಇದೇ ಫೆ.18ರಂದು ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ದೇಶಾದ್ಯಂತ ರೈಲು ರೋಕೋ(ರೈಲು ತಡೆ) ನಡೆಸುವುದಾಗಿ ಪ್ರಕಟಿಸಿವೆ. ರೈತರ ಪ್ರತಿಭಟನೆ ನೇತೃತ್ವ ವಹಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ ಈ ಬಗ್ಗೆ ಘೋಷಣೆ ಮಾಡಿದೆ.

ಕಾಂಗ್ರೆಸ್‌ ಗೆದ್ದರೆ ಕೃಷಿ ಕಾಯ್ದೆ ರದ್ದು

ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಬಿಜೆಪಿ ನಾಯಕರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅವಮಾನಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ರಾಕ್ಷಸಿ ಸ್ವರೂಪಿಯಾದ ಈ ಕಾಯ್ದೆಗಳನ್ನು ಮುಂದುವರಿಸಲ್ಲ.

- ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ

ಸರ್ಕಾರ ಬೀಳಿಸುವ ಉದ್ದೇಶ ನಮಗಿಲ್ಲ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವನ್ನು ಉರುಳಿಸುವುದು ನಮ್ಮ ಉದ್ದೇಶ ಅಲ್ಲ. ಆದರೆ, ನಮ್ಮ ಸಮಸ್ಯೆಗೆ ಪರಿಹಾರ ದೊರೆಯಬೇಕಿದೆ. ಕೇಂದ್ರ ಸರ್ಕಾರ ರೈತರ ವಿಷಯವನ್ನು ಬಗೆಹರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ.

- ರಾಕೇಶ್‌ ಟಿಕಾಯತ್‌, ಭಾರತ್‌ ಕಿಸಾನ್‌ ಯೂನಿಯನ್‌ ಮುಖಂಡ

ಕಾಂಗ್ರೆಸ್‌ಗೇ ಗೊಂದಲ!

1. ಕಾಂಗ್ರೆಸ್‌ ವಿಭಜಿತ, ಗೊಂದಲ ಹೊಂದಿರುವ ಪಕ್ಷ. ಲೋಕಸಭೆಯಲ್ಲೊಂದು, ರಾಜ್ಯಸಭೆಯಲ್ಲೊಂದು ನಿಲುವು ಹೊಂದಿದೆ

2. ಸತ್ಯ ಅರಗಿಸಿಕೊಳ್ಳಲಾಗದೆ ಯೋಜಿತ ರೀತಿ ವಿಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡುತ್ತಿವೆ. ಇಂಥ ಆಟದಿಂದ ಗೆಲ್ಲಲು ಸಾಧ್ಯವಿಲ್ಲ

3. ರೈತ ಹೋರಾಟದ ಬಗ್ಗೆ ಈ ಸದನಕ್ಕೆ, ಸರ್ಕಾರಕ್ಕೆ ಅಪಾರ ಗೌರವವಿದೆ. ಹಾಗಾಗೇ, ಹಿರಿಯ ಸಚಿವರು ಮಾತುಕತೆ ನಡೆಸ್ತಿದಾರೆ

4. ಆದರೆ, ರೈತರ ಹೋರಾಟ ಕೆಲವಿರಂದ ಹೈಜಾಕ್‌ ಆಗುತ್ತಿದೆ. ಆಂದೋಲನ ಜೀವಿಗಳು ಮಾತುಕತೆಗೆ ಕಂಟಕಪ್ರಾಯರಾಗಿದ್ದಾರೆ

5. ಕಾಯ್ದೆಗಳಲ್ಲಿ ಲೋಪಗಳಿದ್ದರೆ ತಿದ್ದುಪಡಿಗೆ ಸಿದ್ಧ. ನಿಮ್ಮಲ್ಲಿ ಮತ್ತೊಮ್ಮೆ ಕೋರುತ್ತೇನೆ, ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ

Follow Us:
Download App:
  • android
  • ios