ಎರಡು ದಿನಗಳ ಭೂತಾನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶನಿವಾರ ರಾಜಧಾನಿ ಥಿಂಪುವಿನಲ್ಲಿ ಗ್ಯಾಲ್ಟ್‌ಸುಯೆನ್‌ ಜೆಟ್ಸನ್‌ ಪೆಮಾ ವಾಂಗ್ಚುಕ್‌ ಮಹಿಳಾ ಮತ್ತ ಮಕ್ಕಳ ಅತ್ಯಾಧುನಿಕ ಆಸ್ಪತ್ರೆಯನ್ನು ಉದ್ಘಾಟಿಸಿದರು. 

ಥಿಂಪು (ಮಾ.24): ಎರಡು ದಿನಗಳ ಭೂತಾನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶನಿವಾರ ರಾಜಧಾನಿ ಥಿಂಪುವಿನಲ್ಲಿ ಗ್ಯಾಲ್ಟ್‌ಸುಯೆನ್‌ ಜೆಟ್ಸನ್‌ ಪೆಮಾ ವಾಂಗ್ಚುಕ್‌ ಮಹಿಳಾ ಮತ್ತ ಮಕ್ಕಳ ಅತ್ಯಾಧುನಿಕ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ಆಸ್ಪತ್ರೆಯನ್ನು ಭಾರತದ ಆರ್ಥಿಕ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಇದೇ ವೇಳೆ ಮುಂದಿನ 5 ವರ್ಷಗಳಲ್ಲಿ ಭಾರತದ ವತಿಯಿಂದ ಭೂತಾನ್‌ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಸಹಾಯಧನ ನೀಡುವುದಾಗಿ ಪ್ರಕಟಿಸಿದರು.

ಈ ಕುರಿತು ಟ್ವೀಟ್‌ ಮಾಡಿದ ಪ್ರಧಾನಿ ಮೋದಿ, ‘ಭೂತಾನ್‌ನಲ್ಲಿ ಅಲ್ಲಿನ ರಾಜ ಮತ್ತು ಪ್ರಧಾನಿಯ ಸಮ್ಮುಖದಲ್ಲಿ ಭಾರತದ ಸಹಾಯದೊಂದಿಗೆ ನಿರ್ಮಿಸಲಾಗಿರುವ ಅತ್ಯಾಧುನಿಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದೇನೆ. ಅಲ್ಲದೆ ನನ್ನನ್ನು ಬೀಳ್ಕೊಡಲು ಸ್ವತಃ ಅಲ್ಲಿನ ರಾಜರೇ ವಿಮಾನ ನಿಲ್ದಾಣಕ್ಕೆ ಬಂದಿದ್ದು ನೋಡಿ ಆನಂದವಾಯಿತು’ ಎಂದು ತಿಳಿಸಿದ್ದಾರೆ. ಶುಕ್ರವಾರ ಪ್ರಧಾನಿ ಮೋದಿಗೆ ಭೂತಾನ್‌ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವನ್ನು ನೀಡಿ ಗೌರವಿಸಲಾಗಿತ್ತು. ಬಳಿಕ ದ್ವಿಪಕ್ಷೀಯ ಮಾತುಕತೆ ನಡೆಸಿ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದವು.

ಬಿಜೆಪಿಗರನ್ನು ದ್ವೇಷಿಸಬೇಡಿ, ಅವರು ನಮ್ಮ ಸೋದರ, ಸೋದರಿಯರು: ಅರವಿಂದ ಕೇಜ್ರಿವಾಲ್‌

ಆಸ್ಪತ್ರೆಯಲ್ಲಿ ಏನೇನು ವಿಶೇಷ?: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಎರಡು ಹಂತದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತವನ್ನು 22 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ 2019ರಲ್ಲೇ ಉದ್ಘಾಟಿಸಲಾಗಿದೆ. ಇದೀಗ ಎರಡನೇ ಹಂತದಲ್ಲಿ 119 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ, ತೀವ್ರ ನಿಗಾ ಘಟಕ, ನವಜಾತ ಶಿಶು ಘಟಕ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಆಸ್ಪತ್ರೆಯಲ್ಲಿ 150 ಹಾಸಿಗೆಗಳಿದ್ದು ಮುಂದಿನ ದಿನಗಳಲ್ಲಿ ಇದೇ ಪ್ರಾಂಗಣದಲ್ಲಿ ಕ್ಯಾನ್ಸರ್‌ ಆಸ್ಪತ್ರೆಯನ್ನು ನಿರ್ಮಿಸುವ ಮೂಲಕ ಭಾರತದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭೂತಾನ್‌ ಯೋಜಿಸಿದೆ.