ಚನ್ನಪಟ್ಟಣ(ಫೆ.28): ಚನ್ನ​ಪ​ಟ್ಟಣದಲ್ಲಿ ಬೊಂಬೆ ಶೋರೂಂ ಪ್ರಾರಂಭಿ​ಸಿರುವ ರೈಲ್ವೆ ಇಲಾಖೆಯ ಕ್ರಮ​ವನ್ನು ಇತ್ತೀಚೆ​ಗಷ್ಟೇ ಪ್ರಶಂಸಿ​ಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಇಲ್ಲಿನ ಆಟಿ​ಕೆ ಉದ್ಯ​ಮ​ವನ್ನು ಜಾಗ​ತಿಕ ಮಟ್ಟ​ದಲ್ಲಿ ವಿಸ್ತ​ರಿ​ಸಲು ರಾಜ್ಯ ಸರ್ಕಾ​ರದ ಜೊತೆ​ಗೂಡಿ ಕಾರ್ಯ​ಕ್ರಮ ರೂಪಿ​ಸು​ವು​ದಾಗಿ ಭರ​ವಸೆ ನೀಡಿ​ದ್ದಾರೆ. ಚನ್ನಪಟ್ಟಣ ಬೊಂಬೆ ಇಡೀ ಜಗತ್ತಿನ ಮಕ್ಕಳಿಗೆ ಸಿಗುವಂತೆ ಮಾಡಲು ನಾನು ನಿಮ್ಮೊಂದಿಗೆ ನಿಂತು ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಕೊರೋನಾ ಹೊಡೆ​ತದಿಂದ ಕಂಗೆ​ಟ್ಟಿ​ದ್ದ ಕರಕುಶಲಕರ್ಮಿಗಳಿಗೆ ಧೈರ್ಯ ತುಂಬಿದ್ದಾರೆ.

ಶನಿವಾರ ದೇಶದ ಮೊದಲ ಆಟಿಕೆ ಮೇಳ ‘ಇಂಡಿಯಾ ಟಾಯ್‌ಫೇರ್‌-2021’ಕ್ಕೆ ವರ್ಚುವಲ್‌ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದ ಅವ​ರು, ಚನ್ನಪಟ್ಟಣ ಕರಕುಶಲಕರ್ಮಿಗಳ ಜತೆಗೆ ವಿಡಿಯೋ ಕಾನ್ಫ​ರೆನ್ಸ್‌ ಮೂಲಕ ಸಂವಾದ ನಡೆಸಿದರು. ಚನ್ನಪಟ್ಟಣದ 6 ಕರಕುಶಲಕರ್ಮಿಗಳು ಸಂವಾ​ದ​ದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಚನ್ನಪಟ್ಟಣದ ಬೊಂಬೆಗಳು ಜಗತ್ತಿನ ಮಕ್ಕಳ ಮೊಗದಲ್ಲಿ ನಗುಮೂಡಿಸಲಿ ಎಂದು ಹಾರೈ​ಸಿ​ದ ಪ್ರಧಾ​ನಿ ಮೋದಿ, ಇಲ್ಲಿನ ಸಾಂಪ್ರದಾಯಿಕ ಬೊಂಬೆ ಉದ್ಯಮಕ್ಕೆ ಜಾಗತಿಕ ಮಾರುಕಟ್ಟೆಕಲ್ಪಿಸುವ ಸಂದೇಶವನ್ನು ಸಾರಿದರು.

ದೇಶದ ಐಟಿ ಹಬ್‌ ಎನಿಸಿಕೊಂಡಿರುವ ಬೆಂಗಳೂರು ನಗರದ ಸಮೀಪದಲ್ಲೇ ಇರುವ ಚನ್ನಪಟ್ಟಣದ ಬೊಂಬೆ ಉದ್ಯಮವನ್ನು ಉತ್ತೇಜಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಆಟಿಕೆ ಉದ್ಯಮ ವಿಸ್ತರಿಸಲು ಕರ್ನಾಟಕ ಸರ್ಕಾರದ ಜತೆಗೂಡಿ ಕಾರ್ಯಕ್ರಮ ರೂಪಿಸಲಾ​ಗು​ವುದು. ಆಟಿಕೆ ಉದ್ಯಮಕ್ಕೆ ನೆರವಾಗಲು ಬೆಂಗಳೂರು ಸ್ಟಾರ್ಟ್‌ಅಪ್‌ಗಳೊಂದಿಗೆ ಸೇರಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.

ಇದೇ ​ವೇಳೆ ಬೊಂಬೆ ತಯಾರಿಕೆಯಲ್ಲಿ ಪುರಾತನ ಪದ್ಧತಿಗೆ ಜೋತು ಬೀಳದೆ ಹೊಸತನವನ್ನು ಅಳವಡಿಸಿಕೊಳ್ಳಿ, ಗ್ರಾಹಕರನ್ನು ಆಕರ್ಷಿಸುವ ರೀತಿಯಲ್ಲಿ ಬೊಂಬೆಗಳನ್ನು ತಯಾರಿಸಿ ಎಂದು ಕುಶಲಕರ್ಮಿಗಳಿಗೆ ಪ್ರಧಾನಿ ಸಲಹೆ ನೀಡಿದರು.

ಚನ್ನಪಟ್ಟಣ ಬೊಂಬೆ ನೋಡಿ ಬಾಲ್ಯ ನೆನ​ಪಾ​ಗು​ತ್ತಿ​ದೆ ಎಂದು ಪ್ರಧಾನಿ ಮೋದಿ

‘ಮೇರಾ ​ಬ​ಚ್‌​ಪನ್‌ ಯಾದ್‌ ಆರ​ಹಾ​ಹೈ​!’

ಸಂವಾದದ ವೇಳೆ ಚನ್ನಪಟ್ಟಣದ ಕರಕುಶಲ ಕರ್ಮಿ ಕೌಸರ್‌ ಪಾಷಾ ಇಲ್ಲಿ ತಯಾರಾಗುವ ವಿವಿಧ ಆಟಿಕೆಯ ಮಾದರಿಗಳನ್ನು ಪ್ರದರ್ಶಿಸಿ​ದ್ದನ್ನು ಕಂಡು ಪ್ರಧಾನಿ ಬಾಯಿಂದ ಬಂದ ಉದ್ಗಾ​ರ​ವಿದು. ವಿವಿಧ ಆಟಿಕೆಯ ಮಾದರಿಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿದ ಪ್ರಧಾನಿ ಮೋದಿ, ಬೊಂಬೆಗಳನ್ನು ನೋಡಿ ನನಗೆ ಬಾಲ್ಯ ನೆನಪಾಗುತ್ತಿದೆ (ಬಚ್‌ಪನ್‌ ಯಾದ್‌ ಆರಹಾಹೈ) ಎಂದು ಸಂತೋಷದಿಂದ ಪ್ರತಿಕ್ರಿಯಿಸಿದರು. ಕೌಸರ್‌ಪಾಷಾ ಅವರು ಆಲೆಮರ ಮತ್ತು ಅರಗನ್ನು ಬಳಸಿ ನೈಸರ್ಗಿಕವಾಗಿ ಇಲ್ಲಿನ ಬೊಂಬೆಗಳನ್ನು ತಯಾರಿಸುತ್ತಿರುವುದಾಗಿ ಪ್ರಧಾನಮಂತ್ರಿಗಳಿಗೆ ಮಾಹಿತಿ ನೀಡಿದರು. ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೆಚ್ಚಿನ ತರಬೇತಿ ಮತ್ತು ಸಾಲ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಆಟಿಕೆ ಮೇಳದಲ್ಲಿ ರಾಜ್ಯದ 26 ಸ್ಟಾಲ್‌

ದೇಶಿ ಬೊಂಬೆಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ವೆಬ್‌ಪೋರ್ಟಲ್‌ ಮಾರುಕಟ್ಟೆಸೃಷ್ಟಿಸಿದೆ. 60 ಸ್ಟಾಲ್‌ಗಳು ಇದರಲ್ಲಿದ್ದು, ಆ ಪೈಕಿ ಚನ್ನಪಟ್ಟಣದ 15 ಹಾಗೂ ಕಿನ್ನಾಳದ 11 ಸ್ಟಾಲ್‌ಗಳು ಇವೆ.

ಪರಿಸರಸ್ನೇಹಿ ಆಟಿಕೆ ತಯಾರಿಸಿ: ಮೋದಿ

ಆಟಿಕೆ ಸಾಮಾನು ಉತ್ಪಾದಕರು ಕಡಿಮೆ ಪ್ಲಾಸ್ಟಿಕ್‌ ಬಳಸಬೇಕು. ಹೆಚ್ಚು ಪರಿಸರ ಸ್ನೇಹಿ ಮತ್ತು ಮರುಬಳಕೆ ಯೋಗ್ಯ ವಸ್ತುಗಳನ್ನು ಆಟಿಕೆಗಳ ತಯಾರಿಕೆಯಲ್ಲಿ ಉಪಯೋಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅಲ್ಲದೆ, ಆಟಿಕೆ ಕ್ಷೇತ್ರದಲ್ಲಿ ಭಾರತ ‘ಆತ್ಮನಿರ್ಭರ’ (ಸ್ವಾವಲಂಬಿ) ಆಗಬೇಕು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿಯಬೇಕು ಎಂದು ಹೇಳಿದ್ದಾರೆ. ದೇಶದ ಮೊದಲ ‘ಆಟಿಕೆ ಮೇಳ’ವನ್ನು ಶನಿವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಅವರು, ‘100 ಶತಕೋಟಿ ಡಾಲರ್‌ ಮೌಲ್ಯದ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಅತ್ಯಂತ ಕಡಿಮೆ. ಶೇ.85ರಷ್ಟುಆಟಿಕೆ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಈ ಪರಿಸ್ಥಿತಿ ಬದಲಾಗಬೇಕು’ ಎಂದು ಹೇಳಿದರು.