ಬೆಂಗಳೂರು ಮೂಲದ ಹೃದ್ರೋಗ ತಜ್ಞ ಹಾಗೂ ಅವರ ಪುತ್ರನ ವಸ್ತುಗಳ ಮರುಬಳಕೆ ಮಾಡುವ ಕಾಳಜಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು (ಮಾ.7): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು ಮೂಲದ ಹಿರಿಯ ಹೃದ್ರೋಗ ತಜ್ಞ ಡಾ.ದೀಪಕ್ ಕೃಷ್ಣಮೂರ್ತಿ ಮತ್ತು ಅವರ ಪುತ್ರನ ವಸ್ತುವಿನ ಮರುಬಳಕೆ ಜಾಗೃತಿಯನ್ನು ಶ್ಲಾಘನೆ ಮಾಡಿದ್ದಾರೆ. ವೇಸ್ಟ್ ಈಸ್ ವೆಲ್ತ್ (ತ್ಯಾಜ್ಯವೇ ಸಂಪತ್ತು) ಎನ್ನುವ ಥೀಮ್‌ನ ಅಡಿಯಲ್ಲಿ ವಸ್ತುಗಳ ಮರುಬಳಕೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಪ್ರಧಾನಿಯವರು ಇದೇ ರೀತಿಯ ಪ್ರಯತ್ನಗಳನ್ನು ತಮ್ಮೊಂದಿಗೆ ಶೇರ್ ಮಾಡಿಕೊಳ್ಳುವಂತೆ ಒತ್ತಾಯಿಸಿದರು, ಇದು ಮರುಬಳಕೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತದೆ ಹಾಗೂ ವೇಸ್ಟ್ ಈಸ್ ವೆಲ್ತ್ ಎನ್ನುವ ಜಾಗೃತಿ ಮೂಡಿಸುತ್ತದೆ ಎಂದಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷಾಂತ್ಯದಲ್ಲಿ ತನ್ನ ಮಗ ತನ್ನ ನೋಟ್‌ಬುಕ್‌ಗಳಿಂದ ಖಾಲಿ ಹಾಳೆಗಳನ್ನು ಹೊರತೆಗೆಯುತ್ತಾನೆ, ನಾನು ಅವರುಗಳನ್ನು ಬೈಂಡಿಂಗ್ ಮಾಡಿಕೊಡಿತ್ತೇನೆ. ಇದನ್ನು ರಫ್ ವರ್ಕ್ ಹಾಗೂ ಅಭ್ಯಾಸಕ್ಕಾಗಿ ಆತ ಬಳಕೆ ಮಾಡುತ್ತಾನೆ ಎಂದು ಕೃಷ್ಣಮೂರ್ತಿ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಸುಸ್ಥಿರ ಜೀವನದ ದೊಡ್ಡ ಸಂದೇಶದೊಂದಿಗೆ ಉತ್ತಮ ತಂಡದ ಪ್ರಯತ್ನವಾಗಿದೆ. ನಿಮ್ಮ ಮಗನಿಗೆ ಮತ್ತು ನಿಮಗೆ ಅಭಿನಂದನೆಗಳು. ಇದೇ ರೀತಿಯ ಪ್ರಯತ್ನಗಳನ್ನು ಇತರರು ನನ್ನೊಂದಿಗೆ ಹಂಚಿಕೊಳ್ಳಲಿ ಎಂದು ಬಯಸುತ್ತೇಮೆ. ಇದು ಮರುಬಳಕೆ ಮತ್ತು ವೇಸ್ಟ್ ಈಸ್ ವೆಲ್ತ್ ಕುರಿತು ಹೆಚ್ಚಿನ ಅರಿವು ಮೂಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
