ಪ್ರಧಾನಿ ನರೇಂದ್ರ ಮೋದಿ ನಾಳೆ ಹರ್ಯಾಣ ಹಾಗೂ ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ. ಆಸ್ಪತ್ರೆ ಉದ್ಘಾಟನೆಗಾಗಿ ಮೋದಿ ಎರಡು ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಪಂಜಾಬ್‌ನಲ್ಲಿ ಉಗ್ರರ ದಾಳಿ ಭೀತಿ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ 

ನವದೆಹಲಿ(ಆ.23): ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 24 ರಂದು ಹರ್ಯಾಣ ಹಾಗೂ ಪಂಜಾಬ್‌ಗೆ ಭೇಟಿ ನೀಡುತ್ತಿದ್ದಾರೆ. ಉಭಯ ರಾಜ್ಯಗಳಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡಲಿರುವ ಮೋದಿ ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ. ಮೋದಿಯ ಕಳೆದ ಪಂಜಾಬ್ ಪ್ರವಾಸದಲ್ಲಿ ಭದ್ರತಾ ಲೋಪವಾಗಿತ್ತು. ಹೀಗಾಗಿ ಭಾರಿ ಸುದ್ದಿಯಾಗಿತ್ತು. ಈ ಬಾರಿ ಮೋದಿ ಆಗಮನದ ಹಿನ್ನಲೆಯಲ್ಲಿ ಉಗ್ರರ ದಾಳಿ ಆತಂಕವೂ ಹೆಚ್ಚಾಗಿದೆ. ಹೀಗಾಗಿ ಪಂಜಾಬ್ ಹಾಗೂ ಹರ್ಯಾಣದಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ. ಹರ್ಯಾಣದ ಫರೀದಾಬಾದ್‌ನಲ್ಲಿ ಮೋದಿ ಅಮೃತ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಇತ್ತ ಪಂಜಾಬ್‌ನಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ನಾಳೆ ಬೆಳಗ್ಗೆ ಹರ್ಯಾಣಗೆ ಭೇಟಿ ನೀಡಲಿರುವ ಮೋದಿ ಅಮೃತ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಪಂಜಾಬ್‌ಗೆ ತರಳಲಿದ್ದಾರೆ.

11 ಗಂಟೆಗೆ ಹರ್ಯಾಣದಲ್ಲಿ ಮೋದಿ ಅಮೃತ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಮಾತಾ ಅಮೃತಾನಂದಮಯಿ ಮಠದ ಆಸ್ಪತ್ರೆ ಇದಾಗಿದೆ. ಬರೋಬ್ಬರಿ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. 2,600 ಬೆಡ್ ಸೌಲಭ್ಯಗಳಿವೆ. ಇನ್ನು ಪಂಜಾಬ್‌ನಲ್ಲಿ ಮಧ್ಯಾಹ್ನ 2.15ಕ್ಕೆ ಹೋಮಿ ಬಾಬಾ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಟಾಟಾ ಮೆಮೋರಿಯಲ್ ಸೆಂಟರ್ ಈ ಆಸ್ಪತ್ರೆ ಕಟ್ಟಿಸಿದೆ. 660 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆ ಕಟ್ಟಿಸಲಾಗಿದೆ. 

2024ರ ಚುನಾವಣೆಗೆ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಸೂಚಿಸಿದ ಅಖಿಲೇಶ್, ರಾಹುಲ್‌ಗಿಲ್ಲ ಸ್ಥಾನ!

ಮೋದಿ ಪಂಜಾಬ್‌ ಭೇಟಿಗೆ ಉಗ್ರರ ದಾಳಿ ಭೀತಿ
ಪ್ರಧಾನಿ ನರೇಂದ್ರ ಮೋದಿಯವರ ಆ.24ರ ಪಂಜಾಬ್‌ ಭೇಟಿ ವೇಳೆ ಪಾಕಿಸ್ತಾನದ ಗುಪ್ತಚರ ದಳ (ಐಎಸ್‌ಐ) ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದೆ ಎಂದು ಭಾರತದ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಬಾರಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಆ.24ರಂದು ಮೋದಿ ಅವರು ಮೊಹಾಲಿಯಲ್ಲಿ ಟಾಟಾ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಭಯೋತ್ಪಾದಕರು ಚಂಡೀಗಢ ಮತ್ತು ಮೊಹಾಲಿಯಲ್ಲಿ ಬಸ್‌ ನಿಲ್ದಾಣ ಮತ್ತು ಬಸ್‌ಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ಮೋದಿ ಅಲ್ಲದೆ ಮಾಜಿ ಉಪ ಮುಖ್ಯಮಂತ್ರಿ ಸುಖ್‌ಜಿಂದರ್‌ ರಾಂಧವಾ, ಮಾಜಿ ಸಚಿವರಾದ ಗುರ್‌ಕೀರತ್‌ ಕೋಟ್ಲಿ ಸೇರಿದಂತೆ 10 ರಾಜಕಾರಣಿಗಳು ಉಗ್ರರ ಹಿಟ್‌ಲಿಸ್ಟ್‌ನಲ್ಲಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಈ ಮಾಹಿತಿಯ ಹಿನ್ನೆಲೆಯಲ್ಲಿ ಪಂಜಾಬ್‌ ಸರ್ಕಾರ ಅವರೆಲ್ಲರ ಭದ್ರತೆ ಹೆಚ್ಚಿಸಿದೆ. ಅಲ್ಲದೆ ರಾಜ್ಯದೆಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಇತ್ತೀಚೆಗಷ್ಟೇ ಪಂಜಾಬ್‌ ಪೊಲೀಸರು ದೆಹಲಿಯಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಧಿಸಿದ್ದರು. ಅವರೆಲ್ಲರೂ ಕೆನಡಾದ ಗ್ಯಾಂಗ್‌ಸ್ಟರ್‌ ಅಷ್‌ರ್‍ ಡಲ್ಲಾ ಹಾಗೂ ಆಸ್ಪ್ರೇಲಿಯಾದ ಗುರ್ಜಂತಾ ಜಿಂಟಾ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಅವರ ವಿಚಾರಣೆಯ ವೇಳೆ ದೆಹಲಿ, ಮೋಗಾ ಹಾಗೂ ಮೊಹಾಲಿಯಲ್ಲೂ ದಾಳಿಗೆ ಸಂಚು ರೂಪಿಸಿದ್ದ ಸಂಗತಿ ಬಯಲಾಗಿದೆ.