ಇಸ್ಲಮಾಬಾದ್(ಮಾ.21): ಕೊರೋನಾ ಸೋಂಕಿಗೆ ತುತ್ತಾಗಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶೀಘ್ರ ಗುಣಮುಖರಾಗಲಿ ಎಂದು ಭಾರತದ ಪಿಎಂ ಮೋದಿ ಹಾರೈಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪಿಎಂ ಮೋದಿ ಕೋವಿಡ್-19ನಿಂದ ಶೀಘ್ರ ಚೇತರಿಕೆಗಾಗಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಶುಭ ಹಾರೈಸುತ್ತೇನೆ ಎಂದು ಬರೆದಿದ್ದಾರೆ.. 

ಇಮ್ರಾನ್ ಖಾನ್ ಅವರಿಗೆ ನಡೆಸಲಾದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿರುವುದಾಗಿ ಪಾಕಿಸ್ತಾನ ಪ್ರಧಾನಿ ಕಾರ್ಯಾಲಯ ವರದಿ ಮಾಡಿತ್ತು. ಇಮ್ರಾನ್ ಖಾನ್ ಪತ್ನಿ ಬುಸ್ರಾ ಬಿಬಿ ಅವರಿಗೂ ಕೋವಿಡ್-19 ದೃಢಪಟ್ಟಿದೆ. 

ಇಮ್ರಾನ್ ಖಾನ್​ಗೆ ಕೊರೋನಾ ಪಾಸಿಟಿವ್ ಬಂದಿರುವ ಬಗ್ಗೆ ಟ್ವೀಟ್ ಮಾಡಿದ್ದ ಪಾಕಿಸ್ತಾನ ಆರೋಗ್ಯ ಸಚಿವರು, ಇಮ್ರಾನ್ ಖಾನ್ ಎರಡು ದಿನಗಳಿಂದ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದು ತಿಳಿಸಿದ್ದರು. ಎರಡು ದಿನಗಳ ಹಿಂದಷ್ಟೇ ಇಮ್ರಾನ್ ಖಾನ್ ಚೀನಾದ ಕೊರೋನಾ ಲಸಿಕೆ ಸಿನೋಫಾರ್ಮ್​ ಪಡೆದುಕೊಂಡಿದ್ದರು.