ನವದೆಹಲಿ[ಡಿ.10]: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಸಾಧನೆ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್, ಅತಿ ಹೆಚ್ಚು ಲೈಕ್ಟ್ ಹಾಗೂ ರೀಟ್ವೀಟ್ ಆಗಿದೆ. ಈ ಮೂಲಕ ಮೋದಿಯ ಆ ಒಂದು ಟ್ವೀಟ್ ಈ ವರ್ಷದ 'ಗೋಲ್ಟನ್ ಟ್ವೀಟ್'  ಎಂಬ ಖ್ಯಾತಿಗೆ ಪಾತ್ರವಾಗಿದೆ.

ಪ್ರಧಾನಿ ಮೋದಿ ಲೋಕಸಭೆಯಲ್ಲಿ ಗಳಿಸಿದ ಗೆಲುವಿನ ಬಳಿಕ ಮಾಡಿದ್ದ ಟ್ವೀಟ್‌ನಲ್ಲಿ 'ಸಬ್‌ಕಾ ಸಾಥ್+ ಸಬ್‌ಕಾ ವಿಕಾಸ್+ ಸಬ್‌ಕಾ ವಿಶ್ವಾಸ್= ವಿಜಯೀ ಭಾರತ್' ಎಂದು ಟ್ವೀಟ್ ಮಾಡಿದ್ದರು. 

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಮಂಗಳವಾರದಂದು ಟ್ವೀಟ್ ಮೂಲಕ ಈ ವಿಚಾರ ಬಹಿರಂಗಪಡಿಸಿದೆ. ಕ್ರೀಡಾ ಕ್ಷೇತ್ರದಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬದಂದು, ದಾಖಲೆ ಸರದಾರ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್ ಅತಿ ಹೆಚ್ಚು ರೀಟ್ವೀಟ್ ಆದ ಖ್ಯಾತಿ ಗಳಿಸಿದೆ. ಧೋನಿಯ ಹುಟ್ಟುಹಬ್ಬದಂದು, ಕೊಹ್ಲಿ ತಮ್ಮಿಬ್ಬರ ಫೋಟೋ ಒಂದನ್ನು ಶೇರ್ ಮಾಡಿ ವಿಶ್ ಮಾಡಿದ್ದರು. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಹ್ಯಾಷ್ ಟ್ಯಾಗ್ ವಿಚಾರದಲ್ಲಿ #LoksabhaElections2019 ಬಳಸಿ ಅತಿ ಹೆಚ್ಚು ಟ್ವೀಟ್ ಮಾಡಲಾಗಿದೆ. ಇದಾದ ಬಳಿಕ #Chandrayaan2, #CWC19, #Pulwama ಹಾಗೂ #Article370 ಅತಿ ಹೆಚ್ಚು ಟ್ರೆಂಡ್ ಹುಟ್ಟಿಸಿವೆ.