Asianet Suvarna News Asianet Suvarna News

ಸಿಎಂಗಳ ಜತೆ ಇಂದು ಮೋದಿ ವ್ಯಾಕ್ಸಿನ್‌ ಸಭೆ, ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿ!

ಸಿಎಂಗಳ ಜತೆ ಇಂದು ಮೋದಿ ವ್ಯಾಕ್ಸಿನ್‌ ಸಭೆ| ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿ| ಲಸಿಕೆ ವಿತರಣೆ ಕಾರ‍್ಯವಿಧಾನಗಳ ಚರ್ಚೆ| ಜ.16ರಿಂದ ಲಸಿಕೆ ನೀಡಿಕೆ ಆರಂಭ

PM Modi to meet all chief ministers on Jan 11 to discuss Covid-19 vaccination rollout pod
Author
Bangalore, First Published Jan 11, 2021, 7:16 AM IST

ಬೆಂಗಳೂರು(ಜ.11): ಕೋವಿಡ್‌-19 ಲಸಿಕೆ ಹಂಚಿಕೆಗೆ ಜ.16ರ ಮುಹೂರ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೋಮವಾರ ಸಿದ್ಧತಾ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಭಾಗಿಯಾಗಲಿದ್ದಾರೆ.

"

ಸೋಮವಾರ ಸಂಜೆ 4 ಗಂಟೆಗೆ ವಿಡಿಯೋ ಸಂವಾದದ ಮೂಲಕ ಈ ಸಭೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಕೋವಿಡ್‌ ಲಸಿಕೆ ವಿತರಣೆಯ ಬಗ್ಗೆ ಕೈಗೊಂಡಿರುವ ಕ್ರಮಗಳು, ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನಿ ಅವರಿಗೆ ವಿವರಿಸುವ ಸಾಧ್ಯತೆ ಇದೆ. ಹಾಗೆಯೇ ಮೋದಿ ಅವರು ಈ ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯ ಸಲಹೆ ಸೂಚನೆಗಳನ್ನು ರಾಜ್ಯಗಳಿಗೆ ನೀಡುವ ನಿರೀಕ್ಷೆಯಿದೆ.

ಭಾರತದಲ್ಲಿ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ನ ‘ಆಕ್ಸ್‌ಫರ್ಡ್‌ ಕೋವಿಶೀಲ್ಡ್‌’ ಲಸಿಕೆ ಹಾಗೂ ಹೈದರಾಬಾದ್‌ ಭಾರತ್‌ ಬಯೋಟೆಕ್‌ನ ‘ಕೋವ್ಯಾಕ್ಸಿನ್‌’ ಲಸಿಕೆಗಳು ತುರ್ತು ಬಳಕೆಗಾಗಿ ಅನುಮೋದನೆ ಪಡೆದಿವೆ. ಮೊದಲ ಹಂತದಲ್ಲಿ ಕೊರೋನಾ ವಿರುದ್ಧ ಹೋರಾಡಿರುವ 3 ಕೋಟಿ ವೈದ್ಯಕೀಯ ಸಿಬ್ಬಂದಿ, ಇತರ ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ.

ಕೊರೋನಾ ನಿಯಂತ್ರಣದ ಬಗ್ಗೆ ಈಗಾಗಲೇ ಹಲವು ಸುತ್ತಿನಲ್ಲಿ ಸಿಎಂಗಳ ಜೊತೆ ಮೋದಿ ಸಭೆ ನಡೆಸಿದ್ದರು. ಈ ಹಿಂದಿನದ್ದೆಲ್ಲಾ ಲಸಿಕೆಗೆ ಅನುಮತಿ ನೀಡುವ ಮುನ್ನಾ ನಡೆದ ಸಭೆಗಳು. ಆದರೆ ಈಗಿನದ್ದು 2 ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕ ಬಳಿಕದ ಮೊದಲ ಸಭೆ. ಹೀಗಾಗಿಯೇ ಈ ಸಭೆ ಮಹತ್ವದ್ದಾಗಿದೆ.

ಕೋ ವಿನ್‌ ಆ್ಯಪ್‌ ಪರಾಮರ್ಶೆ:

ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯವು ಭಾನುವಾರ ವಿವಿಧ ರಾಜ್ಯಗಳ ಆರೋಗ್ಯ ಅಧಿಕಾರಿಗಳ ಜತೆ ಚರ್ಚೆ ನಡೆಸಿತು. ಲಸಿಕೆ ಪಡೆಯುವವರು ಹೆಸರು ನೋಂದಾಯಿಸಿಕೊಳ್ಳಬೇಕಾದ ಕೋ-ವಿನ್‌ ಆ್ಯಪ್‌ ಕುರಿತು ಇತ್ತೀಚಿನ ಡ್ರೈ-ರನ್‌ನಲ್ಲಿ ವ್ಯಕ್ತವಾದ ಪ್ರತಿಕ್ರಿಯೆನ್ನು ಸಭೆಯಲ್ಲಿ ಆಲಿಸಲಾಯಿತು.

ಕೋ-ವಿನ್‌ ಆ್ಯಪ್‌/ವೆಬ್‌ಗೆ ಫಲಾನುಭವಿಯ ಆಧಾರ್‌ ಸಂಖ್ಯೆ ಸಂಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಈ ಮೂಲಕ ಒಬ್ಬನೇ ವ್ಯಕ್ತಿ ಎರಡೆರಡು ಬಾರಿ ಲಸಿಕೆ ಪಡೆಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ‘ಕೊರೋನಾ ಲಸಿಕೆ ಪಡೆಯಲು ಈ ವೆಬ್‌/ಆ್ಯಪ್‌ ವೇದಿಕೆ ಆಗಲಿದ್ದು, ನೋಂದಣಿ ಮಾಡಿಸಿಕೊಂಡವರಿಗೆ ಯಾವುದೇ ಸಮಯ ಹಾಗೂ ಸ್ಥಳದಲ್ಲಿ ಲಸಿಕೆ ಲಭ್ಯವಿರಲಿದೆ’ ಎಂದು ಆರೋಗ್ಯ ಸಚಿವಾಲಯ ಹೇಳಿದೆ

Follow Us:
Download App:
  • android
  • ios