ಅಯೋಧ್ಯೆ(ಆ.05): ರಾಮಮಂದಿರ ನಿರ್ಮಾಣ ಮಾಡಬೇಕೆಂಬ ದೇಶದ ಲಕ್ಷಾಂತರ ರಾಮಭಕ್ತರ ಕನಸು ನನಸಾಗುವ ಶುಭದಿನ ಇದೀಗ ಬಂದಿದೆ. ಬಹುನಿರೀಕ್ಷಿತ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಭೂಮಿಪೂಜೆ ನೆರವೇರಲಿದೆ.

ಇದರೊಂದಿಗೆ ಪ್ರಧಾನಿಯವರು ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ‘ರಾಮಮಂದಿರ ನಿರ್ಮಾಣ’ ವಾಗ್ದಾನವನ್ನು ಸಾಕಾರಗೊಳಿಸಲಿದ್ದಾರೆ. ಮಧ್ಯಾಹ್ನ 12.44.08 ಗಂಟೆಯಿಂದ 12.44.40 ಗಂಟೆಯ 32 ಸೆಕೆಂಡುಗಳ ಶುಭಮುಹೂರ್ತ ನಿಗದಿಯಾಗಿದ್ದು, ಇಷ್ಟುಅವಧಿಯಲ್ಲಿಯೇ ಮೋದಿ ಅವರು ಬೆಳ್ಳಿ ಇಟ್ಟಿಗೆ ಇರಿಸಿ ಸಾಂಕೇತಿಕ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಬೆಳ್ಳಿ ಇಟ್ಟಿಗೆ ಸಾಂಕೇತಿಕವಾದ ಕಾರಣ ಬಳಿಕ, ಅದನ್ನು ಭೂಮಿಪೂಜಾ ಸ್ಥಳದಿಂದ ತೆಗೆದಿರಿಸಲಾಗುತ್ತದೆ.

ಅಯೋಧ್ಯೆಯಲ್ಲಿ 3 ಗಂಟೆ ಇರಲಿದ್ದಾರೆ ಮೋದಿ, ವಿಶೇಷ ಅತಿಥಿ ಯಾರು?

ಈ ನಡುವೆ, ಭೂಮಿಪೂಜೆ ನೆರವೇರಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನೆರೆದ ಆಹ್ವಾನಿತ ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ಮೋದಿ ಸೇರಿದಂತೆ ಐವರು ಮಾತ್ರ ಉಪಸ್ಥಿತರಿರಲಿದ್ದಾರೆ. ಅವರು, ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್‌, ಉತ್ತರಪ್ರದೇಶ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಾತ್ರ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ಒಟ್ಟಾರೆ 175 ಜನರಿಗೆ ಮಾತ್ರವೇ ಆಹ್ವಾನ ನೀಡಲಾಗಿದೆ.

ಬೆಳಗ್ಗೆ 11.30ರ ಸುಮಾರಿಗೆ ನರೇಂದ್ರ ಮೋದಿ ಅವರು ದಿಲ್ಲಿಯಿಂದ ಅಯೋಧ್ಯೆಗೆ ಆಗಮಿಸಲಿದ್ದು, ಮೊದಲು ಹನುಮಾನ್‌ ಗಢಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ರಾಮಲಲ್ಲಾ ದೇಗುಲದಲ್ಲಿ ದರ್ಶನ ಪಡೆದು ಮಧ್ಯಾಹ್ನ 12.44ರ ಮುಹೂರ್ತದಲ್ಲಿ ಭೂಮಿಪೂಜೆ ನೆರವೇರಿಸಿ, ನಂತರ ಮಾತನಾಡಲಿದ್ದಾರೆ. ಈ ನಡುವೆ, ಕಳೆದ 2 ದಿನಗಳಿಂದ ರಾಮಜನ್ಮಭೂಮಿಯಲ್ಲಿ ಹವನ ನಡೆಯುತ್ತಿದ್ದು, ಭೂಮಿಪೂಜೆ ಬಳಿಕ ಪೂರ್ಣಾಹುತಿ ನಡೆಯಲಿದೆ. ಅಲ್ಲಿಗೆ ಭೂಮಿಪೂಜೆಯ ಧಾರ್ಮಿಕ ಕೈಂಕರ್ಯಗಳು ಸಮಾಪನಗೊಳ್ಳಲಿವೆ.

ಭೂಮಿಪೂಜೆ ಹಿನ್ನೆಲೆಯಲ್ಲಿ ಇಡೀ ಅಯೋಧ್ಯೆ ನಗರ ಸಿಂಗಾರಗೊಂಡಿದೆ. ಸರಯೂ ನದಿ ದಂಡೆ ಹಾಗೂ ರಾಮ್‌ ಕೀ ಪೈಡಿಯಲ್ಲಿ ಸಂಜೆ ಸುಮಾರು 1.5 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ಇದೇ ಅಯೋಧ್ಯೆಯ ವಿವಿಧ ದೇವಾಲಯಗಳು ಹಾಗೂ 50 ನಿರ್ದಿಷ್ಟಸ್ಥಳದಲ್ಲಿ ಸಂಜೆ ದೀಪೋತ್ಸವ ಆಚರಿಸಲಾಗುತ್ತದೆ. ಈ ಮೂಲಕ ಅಯೋಧ್ಯೆ ಹೊಸ ಸಂಜೆಯನ್ನು ಕಾಣಲಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಬಳಿ ಕರ್ನಾಟಕ ಭವನ ನಿರ್ಮಾಣಕ್ಕೆ ಪ್ಲಾನ್..!

ರಾಮಮಂದಿರ ನಿರ್ಮಾಣದ ಹೆಜ್ಜೆಗುರುತುಗಳು

"

ಕಟ್ಟೆಚ್ಚರ:

ಗಣ್ಯಾತಿಗಣ್ಯರು ಅಯೋಧ್ಯೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಸಾವಿರಾರು ಪೊಲೀಸರು ಇಡೀ ನಗರವನ್ನು ಹದ್ದಿನಗಣ್ಣಿನಿಂದ ಕಾಯುತ್ತಿದ್ದಾರೆ. ಭೂಮಿಪೂಜೆ ನಡೆವ ಸ್ಥಳ ಮತ್ತು ಪ್ರಧಾನಿ ಮೋದಿ ಸಾಗಿ ಬರುವ ಹಾದಿಯ ಎತ್ತರದ ಕಟ್ಟಡಗಳ ಮೇಲೆ ಸ್ನಿಪ್ಪರ್‌ಗಳನ್ನು ನಿಯೋಜಿಸಲಾಗಿದೆ. ಇಡೀ ನಗರಕ್ಕೆ ಡ್ರೋನ್‌ ಕಣ್ಗಾವಲು ಹಾಕಲಾಗಿದೆ. ಹೊರಗಿನ ಪ್ರದೇಶಗಳಿಂದ ಅಯೋಧ್ಯೆಗೆ ಯಾರೂ ಪ್ರವೇಶಿಸದಂತೆ ಬಿಗಿಬಂದೋಬಸ್‌್ತ ಮಾಡಲಾಗಿದೆ.

ಕಲಬುರಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿ: ಮದ್ಯ ಮಾರಾಟ ನಿಷೇಧ

ಮುಂದುವರಿದ ಧಾರ್ಮಿಕ ಕಾರ್ಯ:

ಈ ನಡುವೆ, ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಹಿನ್ನೆಲೆಯಲ್ಲಿ ಸೋಮವಾರದಿಂದ ಆರಂಭವಾಗಿರುವ ಧಾರ್ಮಿಕ ಕಾರ್ಯಗಳು ಮಂಗಳವಾರ 2ನೇ ದಿನವೂ ಮುಂದುವರಿದವು. ಬೆಳಗ್ಗೆ 9 ಗಂಟೆಗೆ ರಾಮಜನ್ಮಭೂಮಿ ಆವರಣದಲ್ಲಿ 2ನೇ ದಿನವೂ ಯಜ್ಞ ಮುಂದುವರಿಯಿತು. ಹನುಮಾನ್‌ಗಢಿ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಧ್ವಜಪೂಜೆ ನೆರವೇರಿತು. ಬಳಿಕ ರಾಮ ಅರ್ಚನೆ ಹಾಗೂ ರಾಮಚರಣ ಪೂಜೆ ರಾಮಜನ್ಮಭೂಮಿಯಲ್ಲಿ ಸುಮಾರು 5 ತಾಸು ನೆರವೇರಿತು. ರಾಮಚರಣಪೂಜೆ ಮಾಡಿದರೆ ರಾಮ ಪ್ರಸನ್ನನಾಗುತ್ತಾನೆ ಎಂಬ ಪ್ರತೀತಿ ಇದೆ.