ಆಲಿಘರ್(ಡಿ.17)‌: ಡಿಸೆಂಬರ್‌ 22ರಂದು ನಡೆಯಲಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(ಎಎಂಯು)ದ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಎಎಂಯುನಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿರುವ ಮೊಟ್ಟಮೊದಲ ಕಾರ‍್ಯಕ್ರಮ ಇದಾಗಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಮಾರಂಭ ನಡೆಯಲಿದ್ದು, ಮೋದಿ ಜೊತೆಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಲ್‌ ನಿಶಾಂಕ್‌ ಕೂಡ ಪಾಲ್ಗೊಳ್ಳಲಿದ್ದಾರೆ.

ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ತಾರೀಕ್‌ ಮನ್ಸೂರ್‌ ಅವರು ಎಎಂಯು ಪರವಾಗಿ ಪ್ರಧಾನಿಗೆ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಈ ಕಾರ‍್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಶ್ವವಿದ್ಯಾಲಯ ಘೋಷಿಸಿತ್ತು.

ಮಹಮ್ಮದನ್‌ ಆಗ್ಲೋ ಓರಿಯಂಟಲ್‌ ಕಾಲೇಜು ಡಿ.1,1920ರಂದು ಆಲಿಘರ್‌ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾಗಿತ್ತು. ಡಿ.17ರಂದು ಅದರ ಅಧಿಕೃತ ಉದ್ಘಾಟನೆಯಾಗಿತ್ತು.