ಅಮೆರಿಕ ಭೇಟಿ ಮಾಡುವಂತೆ ಟ್ರಂಪ್ ನೀಡಿದ ಆಹ್ವಾನವನ್ನು ಮೋದಿ ತಿರಸ್ಕರಿಸಿದ್ದರು. ಈ ನಡೆ ಭಾರಿ ಚರ್ಚೆಯಾಗಿತ್ತು. ಇದೀಗ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರ ಆಹ್ವಾನ ತಿರಸ್ಕರಿಸಲು ಅಸಲಿ ಕಾರಣವೇನು ಅನ್ನೋದು ಬಹಿರಂಗಪಡಿಸಿದ್ದಾರೆ.
ಒಡಿಶಾ (ಜೂ.20) ಜಿ7 ಶೃಂಗಸಭೆಗಾಗಿ ಕೆನಾಡಗೆ ತೆರಳಿದ್ದ ಪ್ರಧಾನಿ ಮೋದಿ ತೆರಳುವ ಮೊದಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಮೆರಿಕಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಆದರೆ ಈ ಆಹ್ವಾನವನ್ನು ಮೋದಿ ತಿರಸ್ಕರಿಸಿ ನೇರವಾಗಿ ಕ್ರೋವೇಶಿಯಾಗೆ ಪ್ರಯಾಣ ಬೆಳೆಸಿದ್ದರು. ಇದೀಗ ಒಡಿಶಾದಲ್ಲಿ ಅಮೆರಿಕ ಆಹ್ವಾನ ತಿರಸ್ಕರಿಸಿದರ ಅಸಲಿ ಕಾರಣನ್ನು ಪ್ರಧಾನಿ ಮೋದಿ ಬಿಚ್ಚಿಟ್ಟಿದ್ದಾರೆ. ಅಮೆರಿಕ ಅಧ್ಯಕ್ಷರು ಆತ್ಮೀಯವಾಗಿ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಆದರೆ ನಾನು ಆಹ್ವಾನ ಅಷ್ಟೇ ಗೌರವಯುತವಾಗಿ ತಿರಸ್ಕರಿಸಿದೆ. ಕಾರಣ ನನಗೆ ಪುರಿ ಜಗನ್ನಾಥನ ಪುಣ್ಯ ಭೂಮಿಗೆ ಬರಬೇಕಿತ್ತು ಎಂದು ಮೋದಿ ಹೇಳಿದ್ದಾರೆ.
ಪುರಿ ಜಗನ್ನಾಥನ ಆಶೀರ್ವಾದ
ನಿಮ್ಮ ಆಹ್ವಾನಕ್ಕೆ ಧನ್ಯವಾದ ಎಂದ ಮೋದಿ, ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳಿರುವ ಕಾರಣ ಬರವು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದರ ಅಸಲಿ ಕಾರಣ ಏನಂದರೆ ನನಗೆ ತುರ್ತಾಗಿ ಪುರಿ ಜಗನ್ನಾಥನ ಭೂಮಿಗೆ ತೆರಳಬೇಕಿತ್ತು. ಪುರಿ ಜಗನ್ನಾಥನ ಕೃಪೆ, ಭಕ್ತಿ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿದೆ ಎಂದು ಮೋದಿ ಹೇಳಿದ್ದಾರೆ. ಒಡಿಶಾದಲ್ಲಿ ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಅಮೆರಿಕ ಆಹ್ವಾನ, ಪುರಿ ಜಗನ್ನಾಥನ ದರ್ಶನ ಕುರಿತು ಹೇಳಿದ್ದಾರೆ.
ಒಡಿಶಾದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಒಂದು ವರ್ಷ ಪೂರ್ತಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾವುಕ ಭಾಷಣ ಮಾಡಿದರು. ಆದಿವಾಸಿ ಸಮಾಜ, ಶ್ರೀಮಂದಿರ, ಆರೋಗ್ಯ ಯೋಜನೆಗಳು ಮತ್ತು ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದರು. ಅಮೆರಿಕದ ಅಧ್ಯಕ್ಷ ಟ್ರಂಪ್ ಆಹ್ವಾನ ನೀಡಿದ್ರು, ಆದ್ರೆ ಮಹಾಪ್ರಭು ಭೂಮಿಗೆ ಬರಬೇಕಿತ್ತು ಅಂತ ಹೇಳಿದರು.ದೀರ್ಘಕಾಲ ಆಳ್ವಿಕೆ ನಡೆಸಿದ ಪಕ್ಷಗಳು ಆದಿವಾಸಿಗಳನ್ನು ಓಟ್ ಬ್ಯಾಂಕ್ ಆಗಿ ನೋಡಿದವು. ಅವರಿಗೆ ಅಭಿವೃದ್ಧಿ ಅಥವಾ ಗೌರವ ಸಿಕ್ಕಿಲ್ಲ. ನಾವು ನಕ್ಸಲ್ ಪೀಡಿತ ಜಿಲ್ಲೆಗಳನ್ನು ಅಭಿವೃದ್ಧಿ ಪಥಕ್ಕೆ ತಂದಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ರಾಜಕೀಯ ಅಲ್ಲ ಭಕ್ತರ ಶ್ರದ್ಧೆ
ಆಯುಷ್ಮಾನ್ ಭಾರತ್ ಯೋಜನೆಯಿಂದ ಒಡಿಶಾದ ಲಕ್ಷಾಂತರ ಬಡ ಕುಟುಂಬಗಳು ವಂಚಿತರಾಗಿದ್ದವು. ಈಗ ರಾಜ್ಯ ಸರ್ಕಾರದ ಗೋಪಬಂಧು ಜನ ಆರೋಗ್ಯ ಯೋಜನೆ ಮತ್ತು ಕೇಂದ್ರ ಸರ್ಕಾರದ ಯೋಜನೆಯಿಂದ ಸುಮಾರು 3 ಕೋಟಿ ಜನರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ.ಶ್ರೀ ಜಗನ್ನಾಥ ಮಂದಿರದ ಬಗ್ಗೆ ಭಾವುಕರಾಗಿ ಮಾತನಾಡಿದ ಮೋದಿ, ಸರ್ಕಾರ ಬಂದ ತಕ್ಷಣ ಶ್ರೀ ಮಂದಿರದ ನಾಲ್ಕು ಬಾಗಿಲು ತೆರೆದಿವೆ. ರತ್ನ ಭಂಡಾರ ಕೂಡ ತೆರೆದಿದೆ. ಇದು ರಾಜಕೀಯ ವಿಜಯ ಅಲ್ಲ, ಭಕ್ತರ ಶ್ರದ್ಧೆಗೆ ಗೌರವ ಎಂದು ಮೋದಿ ಹೇಳಿದ್ದಾರೆ.
ಒಡಿಶಾ ಭಾರತದ ಪರಂಪರೆಯ ದಿವ್ಯ ತಾರೆ. ಇಲ್ಲಿನ ಸಂಸ್ಕೃತಿ ಶತಮಾನಗಳಿಂದ ದೇಶಕ್ಕೆ ದಾರಿ ತೋರಿಸುತ್ತಿದೆ. ಅಭಿವೃದ್ಧಿ ಮತ್ತು ಪರಂಪರೆಯನ್ನು ಒಟ್ಟಿಗೆ ಮುನ್ನಡೆಸುವಾಗ ಒಡಿಶಾದ ಪಾತ್ರ ಮಹತ್ವದ್ದಾಗಿದೆ ಎಂದು ಮೋದಿ ಹೇಳಿದ್ದಾರೆ. ಮುಖ್ಯಮಂತ್ರಿ ಮೋಹನ್ ಮಾಳಿ ಮತ್ತು ಅವರ ಸರ್ಕಾರದ ಜನಸೇವೆ ಮತ್ತು ಪಾರದರ್ಶಕತೆಯನ್ನು ಶ್ಲಾಘಿಸಿದ ಮೋದಿ, ಇದು ಕೇವಲ ಸರ್ಕಾರದ ವಾರ್ಷಿಕೋತ್ಸವ ಅಲ್ಲ, ಸುಶಾಸನದ ಸ್ಥಾಪನೆಯ ಹಬ್ಬ ಎಂದಿದ್ದಾರೆ.
