ಕೊರೋನಾ ಬರದಂತೆ ತಡೆಗೆಮೋದಿ ಆಯುಷ್ ಮದ್ದು| ನಿರಂತರವಾಗಿ ಬಿಸಿ ನೀರು, ಕಢಾ ಸೇವಿಸುವಂತೆ ಸೂಚನೆ| ಆಯುಷ್ ಇಲಾಖೆ ಸೂಚನೆ ಪಾಲಿಸಲು ಪ್ರಧಾನಿ ಸಲಹೆ
ನವದೆಹಲಿ(ಏ.15): ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ಗೆ ಔಷಧ ಕಂಡುಹಿಡಿಯಲು ವಿಶ್ವದ ಹಲವು ದೇಶಗಳು ಪ್ರಯತ್ನ ಆರಂಭಿಸಿರುವಾಗಲೇ, ಆ ವೈರಸ್ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ ಮದ್ದು ಸೂಚಿಸಿದ್ದಾರೆ.
ರಾಷ್ಟ್ರವನ್ನುದ್ದೇಶಿಸಿ ಮಂಗಳವಾರ ಬೆಳಗ್ಗೆ 10ಕ್ಕೆ ಭಾಷಣ ಮಾಡಿದ ಮೋದಿ ಅವರು, ನಿರಂತರವಾಗಿ ಬಿಸಿ ನೀರು ಹಾಗೂ ಕಢಾ ಕುಡಿಯಿರಿ. ಆಯುಷ್ ಇಲಾಖೆಗಳನ್ನು ಪಾಲಿಸಿ ಎಂದು ಹೇಳಿದರು.
ಕೊರೋನಾ ಹಿನ್ನೆಲೆಯಲ್ಲಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತನ್ಮೂಲಕ ರೋಗ ಬಂದ ಮೇಲೆ ವಾಸಿ ಮಾಡುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಲು ಆಯುಷ್ ಇಲಾಖೆ ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮೋದಿ ಅವರು ಪಾಲನೆ ಮಾಡಲು ಸೂಚನೆ ನೀಡಿರುವುದು ಆ ಮಾರ್ಗಸೂಚಿಗಳನ್ನೇ. ಆ ಪ್ರಕಾರ, ದಿನವಿಡೀ ಬಿಸಿ ನೀರು ಕುಡಿಯಬೇಕು. ನಿತ್ಯ ಅರ್ಧ ತಾಸು ಯೋಗಾಸನ, ಪ್ರಾಣಾಯಮ ಮಾಡಬೇಕು. ಅಡುಗೆಗೆ ಅರಿಶಿಣ, ಜೀರಿಗೆ, ಧನಿಯಾ, ಬೆಳ್ಳುಳ್ಳಿ ಬಳಸಬೇಕು. ಬೆಳಗ್ಗೆ ವೇಳೆ 10 ಗ್ರಾಂ (1 ಚಹಾ ಸ್ಪೂನ್) ಚ್ಯವನಪ್ರಾಶ ಸೇವಿಸಬೇಕು. ಮಧುಮೇಹಿಗಳು ಸಕ್ಕರೆರಹಿತ ಚ್ಯವನಪ್ರಾಶ ಬಳಸಬಹುದು.
3 ಲಕ್ಷ ಜನರ ಮೇಲೆ ಮೋದಿ ಕಣ್ಣು, 2 ನೇ ಹಂತದ ಲಾಕ್‌ಡೌನ್ ಹಿಂದಿನ ರಹಸ್ಯ!
ಕಢಾ ಕುಡಿಯಿರಿ:
ಇದಲ್ಲದೆ ಹರ್ಬಲ್ ಚಹಾ/ಕಢಾ ಕುಡಿಯಬಹುದು. ತುಳಸಿ, ದಾಲ್ಚಿನ್ನಿ (ಚಕ್ಕೆ), ಕಾಳಮೆಣಸು, ಒಣಶುಂಠಿ, ಒಣದ್ರಾಕ್ಷಿಯನ್ನು ಕುದಿಸಿ ಸೋಸಿದ ಕಷಾಯವನ್ನು ಕಢಾ ಎಂದು ಕರೆಯಲಾಗುತ್ತದೆ. ಇದನ್ನು ದಿನಕ್ಕೆ ಒಂದೆರಡು ಬಾರಿ ಸೇವಿಸಬೇಕು. ರುಚಿಯಾಗಿರಬೇಕು ಎನ್ನುವವರು ಬೆಲ್ಲ ಅಥವಾ ನಿಂಬೆ ರಸ ಬಳಸಬಹುದು. ಇದಲ್ಲದೆ 150 ಎಂಎಲ್ ಬಿಸಿ ಹಾಲಿಗೆ ಅರಿಶಿಣ ಸೇರಿಸಿ ದಿನಕ್ಕೆ ಒಂದೆರಡು ಬಾರಿ ಸೇವಿಸಬೇಕು ಎಂದು ಆಯುಷ್ ಇಲಾಖೆ ಸಲಹೆ ಮಾಡಿದೆ.
ಮೂಗಿನ ಹೊಳ್ಳೆಗೆ ಎಣ್ಣೆ ಹಾಕಿ:
ಬೆಳಗ್ಗೆ ಹಾಗೂ ಸಂಜೆ ವೇಳೆ ಮೂಗಿನ ಎರಡೂ ಹೊಳ್ಳೆಗಳಿಗೆ ಎಳ್ಳೆಣ್ಣೆ/ತೆಂಗಿನೆಣ್ಣೆ ಅಥವಾ ತುಪ್ಪ ಹಾಕಿಕೊಳ್ಳಬೇಕು. ಒಂದು ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿ 2ರಿಂದ 3 ನಿಮಿಷ ಮುಕ್ಕಳಿಸಿ ಉಗಿಯಬೇಕು. ಬಳಿಕ ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ದಿನಕ್ಕೆ ಒಂದೆರಡು ಬಾರಿ ಹೀಗೆ ಮಾಡಬಹುದು ಎಂದು ಆಯುಷ್ ಇಲಾಖೆ ಹೇಳಿದೆ.
ಜಗತ್ತಿಗೆ ಕೊರೋನಾ ಹರಡಿದ ಚೀನಾದಿಂದಲೇ ಔಷಧ ಪತ್ತೆ!
ಒಣಕೆಮ್ಮು ಅಥವಾ ಗಂಟಲು ನೋವು ಬಂದರೆ ಪುದಿನ ಎಲೆಗಳು ಅಥವಾ ಓಂ ಕಾಳನ್ನು ಕುದಿಸಿ ಅದರ ಆವಿಯನ್ನು ತೆಗೆದುಕೊಳ್ಳಬೇಕು. ಲವಂಗ ಪುಡಿಯನ್ನು ಬೆಲ್ಲ ಅಥವಾ ಜೇನುತುಪ್ಪದ ಜತೆಗೆ ಬೆರೆಸಿ ದಿನಕ್ಕೆ 2-3 ಬಾರಿ ತೆಗೆದುಕೊಳ್ಳಬಹುದು. ಈ ಕ್ರಮದಿಂದ ಒಣಕೆಮ್ಮು ಹಾಗೂ ಗಂಟಲು ನೋವು ಕಡಿಮೆಯಾಗುತ್ತದೆ. ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದೆ.
