ನವದೆಹಲಿ(ಮಾ.07): ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಕೊರೋನಾ ವೈರಸ್‌ಗೆ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣ ಪತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ತೆಗೆಯುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಇರುವುದು ಚುನಾವಣೆ ನೀತಿಸಂಹಿತೆಯ ಉಲ್ಲಂಘನೆ ಎಂದು ಚುನಾವಣೆ ನಡೆಯುವ ರಾಜ್ಯಗಳ ಪೈಕಿ ಒಂದಾದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಅದರನ್ವಯ ಫೋಟೋ ತೆಗೆಯುವಂತೆ ಆರೋಗ್ಯ ಇಲಾಖೆಗೆ ಆಯೋಗ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಅದರಂತೆ, ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪುದುಚೇರಿಯಲ್ಲಿ ಕೊರೋನಾ ಲಸಿಕೆಯ ಸರ್ಟಿಫಿಕೆಟ್‌ಗಳಿಂದ ಪ್ರಧಾನಿಯ ಭಾವಚಿತ್ರವನ್ನು ಆರೋಗ್ಯ ಇಲಾಖೆ ತೆಗೆಯುವ ಸಾಧ್ಯತೆಯಿದೆ.

ಟಿಎಂಸಿ ಸಂಸದ ಡೆರೆಕ್‌ ಓ’ಬ್ರಿಯಾನ್‌ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರದ ಖರ್ಚಿನಲ್ಲಿ ಜಾಹೀರಾತು ನೀಡುವುದು ತಪ್ಪು. ಕೋವಿನ್‌ ವೆಬ್‌ಸೈಟ್‌ ಹಾಗೂ ಕೊರೋನಾ ಲಸಿಕೆ ಸರ್ಟಿಫಿಕೆಟ್‌ನಲ್ಲಿ ಸರ್ಕಾರದ ಖರ್ಚಿನಲ್ಲಿ ಪ್ರಧಾನಿಯ ಫೋಟೋ ಪ್ರಕಟಿಸಿ ಪ್ರಚಾರ ಪಡೆಯಲಾಗುತ್ತಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆ’ ಎಂದು ದೂರಿದ್ದರು.