ನವದೆಹಲಿ(ಜ.11.): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ವಿಶ್ವಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್‌ ಕಾಯಂ ಆಗಿ ರದ್ದುಗೊಳಿಸುವುದರೊಂದಿಗೆ ಟ್ವೀಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ನಂ.1 ಸಕ್ರಿಯ ರಾಜಕಾರಣಿ ಎಂಬ ಅಭಿದಾನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಭಿಸಿದೆ.

ಟ್ರಂಪ್‌ ಅವರು ಟ್ವೀಟರ್‌ನಲ್ಲಿ 8.87 ಕೋಟಿ ಹಿಂಬಾಲಕರನ್ನು ಹೊಂದಿದ್ದರು. ತನ್ಮೂಲಕ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಸಕ್ರಿಯ ರಾಜಕಾರಣಿ ಎನಿಸಿಕೊಂಡಿದ್ದರು. ಆದರೆ ಅಮೆರಿಕದ ಸಂಸತ್‌ ಭವನ ಕ್ಯಾಪಿಟಲ್‌ ಹಿಲ್‌ಗೆ ಮುತ್ತಿಗೆ ಹಾಕುವಂತೆ ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿ ಹಿಂಸಾಚಾರಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಟ್ರಂಪ್‌ ಅವರ ಟ್ವೀಟರ್‌ ಖಾತೆಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಎರಡನೇ ಸ್ಥಾನದಲ್ಲಿದ್ದ ಮೋದಿ ಅವರು ಪ್ರಥಮ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು 12.9 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಜಗತ್ತಿನಲ್ಲೇ ಅತಿಹೆಚ್ಚು ಫಾಲೋವ​ರ್‍ಸ್ಗಳನ್ನು ಹೊಂದಿರುವ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಅವರು ಸಕ್ರಿಯ ರಾಜಕಾರಣದಲ್ಲಿ ಇಲ್ಲ.

ಜ.20ರಂದು ಅಮೆರಿಕ ಅಧ್ಯಕ್ಷರಾಗಲಿರುವ ಜೋ ಬೈಡೆನ್‌ ಅವರಿಗೆ 2.33 ಕೋಟಿ ಹಿಂಬಾಲಕರಿದ್ದಾರೆ. ಭಾರತದ ಗೃಹ ಸಚಿವ ಅಮಿತ್‌ ಶಾ ಅವರಿಗೆ 2.42 ಕೋಟಿ ಫಾಲೋವ​ರ್‍ಸ್ಗಳಿದ್ದು, ಇದು ಬೈಡೆನ್‌ ಹೊಂದಿರುವ ಹಿಂಬಾಲಕರ ಸಂಖ್ಯೆಗಿಂತ ಅಧಿಕವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಟ್ವೀಟರ್‌ನಲ್ಲಿ 2.12 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ.