ನವದೆಹಲಿ (ಅ. 22): ಸ್ವದೇಶಿಯವಾಗಿ ನಿರ್ಮಿಸಿದ ಲಘು ವಿಮಾನವೊಂದರ ಪ್ರಾಯೋಗಿಕ ಹಾರಾಟಕ್ಕೆ ಇದ್ದ ಅಡೆತಡೆಗಳನ್ನು ಪ್ರಧಾನಿ ನರೇಂದ್ರ ಮೋದಿ ನಿವಾರಿಸಿದ್ದಾರೆ.

ಯುವ ಪೈಲಟ್‌ ಕ್ಯಾಪ್ಟನ್‌ ಅಮೋಲ್‌ ಯಾದವ್‌ ಮುಂಬೈನಲ್ಲಿ ತಮ್ಮ ಸ್ವಂತ ಶ್ರಮದಿಂದ ಆರು ಆಸನದ ವಿಮಾನವೊಂದನ್ನು ಸಿದ್ಧಪಡಿಸಿದ್ದಾರೆ. ಆದರೆ, ವಿಮಾನವನ್ನು ಪ್ರಯೋಗಾತ್ಮಕವಾಗಿ ಹಾರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದಿಂದ ನಿಯಂತ್ರಕ ಅನುಮತಿ ಪಡೆಯಲು 2011ರಿಂದ ಸಾಧ್ಯವಾಗಿರಲಿಲ್ಲ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರಿಂದ ಈ ಸಂಗತಿ ತಿಳಿದ ಮೋದಿ, ವಿಮಾನದ ಹಾರಾಟಕ್ಕೆ ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ಕಳೆದವಾರ ಸೂಚಿಸಿದ್ದರು. ಇದಾದ ಒಂದೇ ವಾರದಲ್ಲಿ ವಿಮಾನ ಹಾರಾಟಕ್ಕೆ ಡಿಜಿಸಿಎ ಅನುಮೋದನೆ ದೊರೆತಿದೆ.

ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ, ಅಮೊಲ್‌ ಯಾದವ್‌ಗೆ ಸೋಮವಾರ ಹಾರಾಟ ಅನುಮತಿ ಪತ್ರವನ್ನು ಹಸ್ತಾಂತರಿಸಿದ್ದಾರೆ. ಯೋಜನೆಗೆ ಅನುಮೋದನೆ ದೊರೆತಿರುವುದಕ್ಕೆ ಮೋದಿಗೆ ಅಮೋಲ್‌ ಯಾದವ್‌ ಕೃತಜ್ಞತೆ ಸಲ್ಲಿಸಿದ್ದಾರೆ.