ನವದೆಹಲಿ(ಜು.16): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭವ್ಯ ರಾಮಮಂದಿರಕ್ಕೆ ಆಗಸ್ಟ್‌ 3 ಅಥವಾ 5ರಂದು ಭೂಮಿ ಪೂಜೆ ನಡೆಸುವ ಸಾಧ್ಯತೆ ಇದೆ. ಈ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜು.18ರಂದು ರಾಮಮಂದಿರ ದೇಗುಲ ಟ್ರಸ್ಟ್‌ನ ಸಭೆ ನಡೆಯಲಿದ್ದು, ಅಲ್ಲಿ ಭೂಮಿ ಪೂಜೆ ಸೇರಿದಂತೆ ಮುಂದಿನ ಹಂತದ ಹಲವು ಕಾರ್ಯಕ್ರಮಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. ರಾಮಮಂದಿರ ಕಟ್ಟಡ ನಿರ್ಮಾಣದ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮೋದಿ ಅವರಿಗೆ ಈ ಹಿಂದೆಯೇ ಟ್ರಸ್ಟ್‌ ಪತ್ರ ಮುಖೇನ ಕೋರಿಕೆ ಸಲ್ಲಿಸಿತ್ತು. ಅದಕ್ಕೂ ಮುನ್ನ ಒಮ್ಮೆ ಮೋದಿಯನ್ನು ಟ್ರಸ್ಟ್‌ನ ಸದಸ್ಯರು ಭೇಟಿಯಾಗಿದ್ದಲೂ ಈ ಕುರಿತು ಮನವಿ ಸಲ್ಲಿಸಲಾಗಿತ್ತು.

ಭಾರೀ ಅದ್ಧೂರಿಯಿಂದ ಭೂಮಿಪೂಜೆಗೆ ಈ ಮೊದಲು ನಿರ್ಧರಿಸಲಾಗಿತ್ತಾದರೂ, ಕೊರೋನಾ ಹಿನ್ನೆಲೆಯಲ್ಲಿ ಆಯ್ದ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜನೆಗೆ ಟ್ರಸ್ಟ್‌ ನಿರ್ಧರಿಸಿದೆ.