ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಹೊಸ ತಳಿ ಆತಂಕ: ಸಿಎಂ ಸಭೆಯಲ್ಲಿ ಮೋದಿ ಎಚ್ಚರಿಕೆ!
* ಕರ್ನಾಟಕ ಸೇರಿ ಆರು ರಾಜ್ಯದ ಸಿಎಂಗಳ ಜೊತೆ ಮೋದಿ ಸಭೆ
* ರಾಜ್ಯದಲ್ಲಿರುವ ಕೊರೋನಾ ಪರಿಸ್ಥಿತಿ ಬಗ್ಗೆ ಮೋದಿ ಚರ್ಚೆ
* ಏರುತ್ತಿರುವ ಕೊರೋನಾ ಪ್ರಕರಣಗಳ ಬಗ್ಗೆ ಮೋದಿ ಆತಂಕ
ನವದೆಹಲಿ(ಜು.16): ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರಗಳು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಭೆ ಮಾಡಿ ಮಾಹಿತಿ ಪಡೆದಿದ್ದಾರೆ. ಈ ಹಿನ್ನೆಲೆ ಇಂದು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಹಾಗೂ ಕೇರಳದ ಮುಖ್ಯಮಂತ್ರಿಗಳ ಜೊತೆ ಆಯಾ ರಾಜ್ಯಗಳ ಕೋವಿಡ್ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ಇದಕ್ಕೂ ಮುನ್ನ ಜುಲೈ 13 ರಂದು ಪ್ರಧಾನಿ ಮೋದಿ ಅಸ್ಸಾಂ, ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂನ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು.
ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಹೊಸ ತಳಿಯ ಆತಂಕ
ಕೊರೋನಾ ನಿಯಂತ್ರಿಸದಿದ್ದರೆ, ಹೊಸ ರೂಪಾಂತರಿ ತಳಿಯ ಅಪಾಯ ಹೆಚ್ಚಲಿದೆ ಎಂದು ತಜ್ಞರು ಹೇಳಿರುವುದಾಗಿ ಎಂದು ಮೋದಿ ಈ ವೇಳೆ ಹೇಳಿದರು. ಪ್ರಸ್ತುತ ಮೂರನೇ ಕೊರೋನಾ ಅಲೆಯ ಅಪಾಯವಿದೆ. ಹೀಗಿರುವಾಗ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ ಎಂಬುದು ಆತಂಕದ ವಿಷಯ. ಅಲ್ಲದೇ ಇನ್ನಿತರ ಕೆಲ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದೂ ಆತಂಕದ ವಿಚಾರ ಎಂದೂ ಹೇಳಿದ್ದಾರೆ.
ಪಾಸಿಟಿವಿಟಿ ದರ ಹೆಚ್ಚಿರುವ ರಾಜ್ಯಗಳ ಮೇಲೆ ಹೆಚ್ಚಿನ ನಿಗಾ
ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳು, ಈಗಾಗಲೇ ಅಳವಡಿಸಿಕೊಂಡಿರುವ ನಿಯಮಗಳ ಬಗ್ಗೆ ಗಮನ ಕೊಡಿ ಹಾಗೂ ಮೈಕ್ರೋ ಕಂಟೈನ್‌ಮೆಂಟ್ ವಲಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ಮೋದಿ ಸೂಚಿಸಿದ್ದಾರೆ. ಕಳೆದ ವಾರದಲ್ಲಿ ಸುಮಾರು 80% ಹೊಸ ಪ್ರಕರಣಗಳು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ, ಕೇರಳದಿಂದಲೇ ಬಂದಿವೆ ಎಂದೂ ಮೋದಿ ಈ ಸಭೆಯಲ್ಲಿ ಉಲ್ಲೇಖಿಸಿದ್ದಾರೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆಯೂ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.
ಚಿಕಿತ್ಸೆಗಾಗಿ ಜನರು ಅಲೆಯದಂತೆ ಹೆಚ್ಚರ ವಹಿಸಿ
ಇದೇ ವೇಳೆ ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣ ಬೇಗ ಪೂರ್ಣಗೊಳಿಸುವಂತೆಯೂ ಮೋದಿ ಸೂಚಿಸಿದ್ದು, ಈ ಕೆಲಸವನ್ನು ನೋಡಲು ಒಬ್ಬ ಹಿರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಆದೇಶಿಸಿದ್ದಾರೆ. 15 ರಿಂದ 20 ದಿನದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ವಾಗುವಂತೆ ಕ್ರಮ ವಹಿಸಿ ಹಾಗೂ ಕಂಟ್ರೋಲ್ ರೂಮ್ , ಕಾಲ್ ಸೆಂಟರ್‌ಗಳನ್ನು ಸನ್ನದ್ದವಾಗಿಡಿ ಎಂದೂ ತಿಳಿಸಿದ್ದಾರೆ. ಇನ್ನು ಕೊರೋನಾ ಹಾಗೂ ಲಭ್ಯವಿರುವ ವ್ಯವಸ್ಥೆ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡಿ, ಚಿಕಿತ್ಸೆಗಾಗಿ ಜನರು ಅಲೆಯದಂತೆ ಹೆಚ್ಚರ ವಹಿಸುವಂತೆಯೂ ತಿಳಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಶ್ರಮ ವಹಿಸಲು ಆದೇಶಿಸಿದ್ದಾರೆ.