ಉಜ್ವಲಾ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಪಡೆದ ಬಡ ಮಹಿಳೆಯರಿಗೆ ಮೋದಿ ಸರ್ಕಾರ ಬಂಪರ್ ಕೊಡುಗೆ ನೀಡಿದೆ. 300 ರೂಪಾಯಿ ಸಬ್ಸಿಡಿಯನ್ನು 2025ರ ಮಾರ್ಚ್ ತಿಂಗಳ ವರೆಗೆ ವಿಸ್ತರಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. 

ನವದೆಹಲಿ(ಮಾ.07) ಉಜ್ವಲ ಯೋಜನೆ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೀಗ ಮತ್ತೆ ಮೂರು ತಿಂಗಳು ಈ ಯೋಜನೆಯನ್ನು ಮೋದಿ ಸರ್ಕಾರ ವಿಸ್ತರಿಸಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ನೀಡುತ್ತಿದ್ದ 200 ರೂಪಾಯಿ ಸಬ್ಸಿಡಿಯನ್ನು 300 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದೀಗ ಈ ಯೋಜನೆಯನ್ನು ಮುಂದಿನ ವರ್ಷ ಮಾರ್ಚ್ ತಿಂಗಳ ವರೆಗೆ ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ.

14.2 ಕೆಜಿ LPG ಸಿಲಿಂಡರ್‌ಗೆ ನೀಡುತ್ತಿದ್ದ 300 ರೂಪಾಯಿ ಸಬ್ಸಿಡಿ ಯೋಜನೆ ಲಾಭವನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಣೆಯಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಸಬ್ಸಿಡಿ ವಿಸ್ತರಣೆ ಘೋಷಣೆ ಮಾಡಿದ್ದಾರೆ. ಪ್ರತಿ ವರ್ಷಕ್ಕೆ 12 ರೀಫಿಲ್‌ಗಳಿಗೆ 14.2 ಕೆಜಿ ಸಿಲಿಂಡರ್‌ಗಳಿಗೆ 300 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. 

ಕೇಂದ್ರ ಬಜೆಟ್ ದಿನವೆ ಎಲ್‌ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳ!

2022ರ ಮೇ ತಿಂಗಳಲ್ಲಿ ಉಜ್ವಲ ಯೋಜನೆ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿ ನೀಡಲು ಘೋಷಣೆ ಮಾಡಿತ್ತು. ಇದರಂತೆ ಫಲಾನುಭವಿಗಳಿಗೆ 200 ರೂಪಾಯಿಯಂತೆ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿತ್ತು. 2023ರ ಅಕ್ಟೋಬರ್ ತಿಂಗಳಲ್ಲಿ 200 ರೂಪಾಯಿ ಸಬ್ಸಿಡಿಯನ್ನು 300 ರೂಪಾಯಿಗೆ ಏರಿಕೆ ಮಾಡಿ ಬಡವರ ಮೇಲಿದ್ದ ಹಣದುಬ್ಬರದ ಹೊರೆಯನ್ನು ತಗ್ಗಿಸಲಾಗಿತ್ತು. 

2023ರ ಅಂತ್ಯದಲ್ಲಿ ನಡೆದ ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್ ಮೇಲೆ 200 ರೂಪಾಯಿ ಕಡಿತ ಮಾಡಲಾಗಿತ್ತು. ಹೀಗಾಗಿ ಸಿಲಿಂಡರ್ ಬೆಲೆ 903 ರೂಪಾಯಿಗೆ ಇಳಿಕೆಯಾಗಿತ್ತು. ಇತ್ತ ಉಜ್ವಲ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿಯಿಂದ 603 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಲಭ್ಯವಾಗುತ್ತಿತ್ತು.

ಹೇಗಿದೆ ನಿಮ್ಮ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ದರ

ಎಲ್‌ಪಿಜಿ ಸಂಪರ್ಕವು ಗ್ರಾಮೀಣ ಮತ್ತು ವಂಚಿತ ಬಡ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಲು, ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ-ಮುಕ್ತ ಎಲ್‌ಪಿಜಿ ಸಂಪರ್ಕಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. 2016ರ ಮೇನಲ್ಲಿ ಈ ಯೋಜನೆ ಆರಂಭವಾಗಿದೆ. 2022-23ಕ್ಕೆ, ಉಜ್ವಲ ಸಬ್ಸಿಡಿಗಾಗಿ ರೂ 6,100 ಕೋಟಿಗಳನ್ನು ಒದಗಿಸಲಾಗಿತ್ತು. 2023-24 ಹಣಕಾಸು ವರ್ಷದಲ್ಲಿ (ಏಪ್ರಿಲ್ 2023 ರಿಂದ ಮಾರ್ಚ್ 2024 ರವರೆಗೆ) ರೂ 7,680 ಕೋಟಿಗೆ ಏರಿಕೆ ಮಾಡಲಾಗಿದೆ.ಈ ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಉಜ್ವಲ ಯೋಜನೆಯ ಎಲ್‌ಪಿಜಿ ಬಳಕೆಯು 3 ವರ್ಷಗಳಲ್ಲಿ ಶೇ.20ರಷ್ಟು ಹೆಚ್ಚಿದೆ.