ಪ್ರಧಾನಿ ಮೋದಿ ಐಎನ್ಎಸ್ ರಿಕೊರ್, ಐಎನ್ಎಸ್ ನಿಲ್ಲಿಗಿರಿ ಮತ್ತು ಐಎನ್ಎಸ್ ವಗ್ಶೀರ ನೌಕೆಗಳನ್ನು ನೌಕಾಪಡೆಗೆ ಸಮರ್ಪಿಸಿದರು. ಭಾರತದ ಗುರಿ ಅಭಿವೃದ್ಧಿಯೇ ಹೊರತು ವಿಸ್ತಾರವಾದ ಅಲ್ಲ ಎಂದು ಹೇಳಿದರು. ಸಮುದ್ರವನ್ನು ಸುರಕ್ಷಿತ ಮತ್ತು ಸಮೃದ್ಧಗೊಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದರು.
ಮುಂಬೈ: ಭಾರತದ ಗುರಿ ಅಭಿವೃದ್ಧಿಯೇ ಹೊರತು ವಿಸ್ತಾರವಾದ ಅಲ್ಲ. ಭಾರತ ಯಾವತ್ತಿಗೂ ಮುಕ್ತ, ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಸಮೃದ್ಧತೆಯನ್ನು ಇಂಡೋ-ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಮೂಲಕ ಬಲಿಷ್ಠ ನೌಕಾಪಡೆಯೊಂದಿಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಅಧಿಪತ್ಯ ಸಾಧಿಸಿ, ನೆರೆಯ ದೇಶಗಳಿಗೆ ಬೆದರಿಕೆಯೊಡ್ಡುವ ಚೀನಾಗೆ ಸಂದೇಶ ರವಾನಿಸಿದ್ದಾರೆ. ಮುಂಬೈನಲ್ಲಿ ಬುಧವಾರ ಇದೇ ಮೊದಲ ಬಾರಿಗೆ ದೇಶೀ ನಿರ್ಮಿತ ಐಎನ್ಎಸ್ ರಿಕೊರ್, ಐಎನ್ಎಸ್ ನಿಲ್ಲಿಗಿರಿ ಯುದ್ಧನೌಕೆ ಮತ್ತು ಐಎನ್ಎಸ್ ವಗ್ಶೀರ ಜಲಾಂತರ್ಗಾಮಿ ನೌಕೆಗಳನ್ನು ನೌಕಾಪಡೆಗೆ ಅರ್ಪಣೆ ಮಾಡಿ ಮಾತನಾಡಿದರು
ಸಮುದ್ರವನ್ನು ಮಾದಕವಸ್ತು, ಶಸ್ತ್ರಾಸ್ತ್ರಗಳು ಮತ್ತು ಭಯೋತ್ಪಾದಕರಿಂದ ಮುಕ್ತವಾಗಿಸಲು ಮತ್ತು ಸುರಕ್ಷಿತ ಹಾಗೂ ಸಮೃದ್ಧಗೊಳಿಸಲು ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಬೇಕು. ಇದೀಗ ಭಾರತವು ಪ್ರಮುಖ ನೌಕಾಶಕ್ತಿಯಾಗಿ ಬೆಳೆಯುತ್ತಿದ್ದು, ವಿಶ್ವದ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಡುತ್ತಿದೆ ಎಂದರು.
ಭಾರತವು ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಭದ್ರತೆ, ಆರ್ಥಿಕತೆ ಮತ್ತು ಭೌಗೋಳಿಕ ಬದಲಾವಣೆಗಳಿಗೆ ದಿಕ್ಕು ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಪ್ರಾದೇಶಿಕ ಜಲಪ್ರದೇಶದ ರಕ್ಷಣೆ, ಜಲಸಂಚಾರದ ಸ್ವಾತಂತ್ರ್ಯ ಮತ್ತು ಟ್ರೇಡ್ ಮತ್ತು ಸಮುದ್ರ ಮಾರ್ಗಗಳನ್ನು ರಕ್ಷಿಸುವುದು ಯಾವತ್ತಿಗೂ ಮುಖ್ಯ. ಭಾರತದ ಕೆಲಸ-ಕಾರ್ಯಗಳ ಉದ್ದೇಶ ಅಭಿವೃದ್ಧಿಯೇ ಹೊರತು ವಿಸ್ತಾರವಾದ ಅಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.
ಆತ್ಮನಿರ್ಭರ ಭಾರತ ಪರಿಕಲ್ಪನೆಯು ದೇಶವನ್ನು ಶಕ್ತಿಯುತ, ಸ್ವಾವಲಂಬಿ ಮಾಡಿದೆ. ಕಳೆದ 10 ವರ್ಷಗಳಲ್ಲಿ 33 ನೌಕೆ, ಏಳು ಸಬ್ ಮರೀನ್ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ. ಭಾರತದ ರಕ್ಷಣಾ ಉತ್ಪಾದನೆಯು 1.25 ಲಕ್ಷ ಕೋಟಿ ದಾಟಿದೆ ಎಂದು ಹೇಳಿದರು.
