ನವದೆಹಲಿ(ಮಾ.01):  ಸ್ವಚ್ಛತೆ ಹಾಗೂ ದೈಹಿಕ ಕ್ಷಮತೆ ಕಾಯ್ದುಕೊಳ್ಳುವ ಉದ್ದೇಶದ ಆಂದೋಲನಗಳನ್ನು ಆರಂಭಿಸಿ ಗಮನ ಸೆಳೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಮತ್ತೊಂದು ಆಂದೋಲನಕ್ಕೆ ಭಾನುವಾರ ಶ್ರೀಕಾರ ಹಾಕಿದ್ದಾರೆ. ಮಳೆಗಾಲದ ಆರಂಭದೊಳಗೆ ಕೆರೆ-ಕಟ್ಟೆಗಳನ್ನು ಸ್ವಚ್ಛಗೊಳಿಸುವ ‘ಮಳೆ ನೀರು ಹಿಡಿ’ ಆಂದೋಲನಕ್ಕೆ ಅವರು ಕರೆ ನೀಡಿದ್ದಾರೆ. 100 ದಿನಗಳ ಆಂದೋಲನ ಇದಾಗಿದ್ದು, ಮುಂಗಾರು ಹಂಗಾಮು ಆರಂಭವಾಗುವ ಒಳಗೆ ಹೂಳು ತುಂಬಿದ ಕೆರೆಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಅವರು ನೀಡಿದ್ದಾರೆ.

ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಮೋದಿ, ‘ನೀರಿನ ಸಂರಕ್ಷಣೆ ಎನ್ನುವುದು ಎಲ್ಲರ ಜವಾಬ್ದಾರಿ. ಇದಕ್ಕೆಂದೇ ಜಲಶಕ್ತಿ ಸಚಿವಾಲಯ ‘ಕ್ಯಾಚ್‌ ದ ರೇನ್‌’ (ಮಳೆ ನೀರು ಹಿಡಿ) ಆಂದೋಲನ ಆರಂಭಿಸಲಿದೆ. ಎಲ್ಲಿ ಮಳೆ ಹನಿ ಬೀಳುತ್ತದೋ, ಒಂದೊಂದು ಹನಿಯನ್ನೂ ಸಂರಕ್ಷಿಸುವುದು ಇದರ ಉದ್ದೇಶ’ ಎಂದರು.

ಆತ್ಮನಿರ್ಭರ ಭಾರತದ ಮಂತ್ರ ಹಳ್ಳಿ ಹಳ್ಳಿಗೂ ತಲುಪುತ್ತಿದೆ: ಮೋದಿ ಮನ್‌ ಕೀ ಬಾತ್!

‘ಜೂನ್‌ನಲ್ಲಿ ಮಳೆಗಾಲ ಆರಂಭವಾಗುತ್ತದೆ. ಅದಕ್ಕೆ ಮುಂಚಿನ 100 ದಿನಗಳಲ್ಲಿ ಎಲ್ಲ ಕೆರೆಗಳನ್ನು, ಜಲಮೂಲಗಳನ್ನು ಹೂಳುಮುಕ್ತಗೊಳಿಸಬೇಕು. ಇದರಿಂದಾಗಿ ಮಳೆಗಾಲ ಆರಂಭವಾದಾಗ ಬಿದ್ದ ಮಳೆ ಹನಿಗಳು ಕೆರೆ ಸೇರಿ ಜಲಸಂರಕ್ಷಣೆ ಸಾಧ್ಯವಾಗಲಿದೆ. ಮಳೆನೀರು ಕೊಯ್ಲು ಸಾಮೂಹಿಕ ಜವಾಬ್ದಾರಿ’ ಎಂದರು.

ಇದೇ ವೇಳೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಅಗ್ರೌಥಾ ಗ್ರಾಮದಲ್ಲಿ ಬಬಿತಾ ರಜಪೂತ್‌ ಎಂಬ ಮಹಿಳೆ ಇತರೆ ಕೆಲ ಮಹಿಳೆಯರ ಜೊತೆಗೂಡಿ ಒಣಗಿ ಹೋಗಿದ್ದ ಕೆರೆಯೊಂದಕ್ಕೆ ಮಳೆ ನೀರು ಹರಿಸುವ ಮೂಲಕ ಬರಗಾಲದಲ್ಲೂ ನಳನಳಿಸುವಂತೆ ಮಾಡಿದ ಘಟನೆಯನ್ನು ಪ್ರಧಾನಿ ಮೋದಿ ಉದಾಹರಿಸಿದರು.

ಆತ್ಮನಿರ್ಭರತೆ ಕೇವಲ ಸರ್ಕಾರದ್ದಲ್ಲ:

ಈ ನಡುವೆ, ಸರ್ಕಾರ ಆರಂಭಿಸಿರುವ ಆತ್ಮನಿರ್ಭರ (ಸ್ವಾವಲಂಬಿ ಭಾರತ) ಆಂದೋಲನ ಕೇವಲ ಸರ್ಕಾರಕ್ಕೆ ಸೀಮಿತವಾದದ್ದಲ್ಲ. ಇದೊಂದು ರಾಷ್ಟ್ರೀಯ ಸ್ಫೂರ್ತಿಯ ಆಂದೋಲನ. ಇದು ಇಂದು ಹಳ್ಳಿ ಹಳ್ಳಿಗೆ ತಲುಪುತ್ತಿದೆ ಎಂದು ಮೋದಿ ಹೇಳಿದರು.

‘ದೇಶೀ ನಿರ್ಮಿತ ತೇಜಸ್‌ ಯುದ್ಧವಿಮಾನ ನಭಕ್ಕೆ ನೆಗೆದಾಗ, ಮೆಟ್ರೋ ರೈಲುಗಳು ಓಡಿದಾಗ, ಕ್ಷಿಪಣಿಗಳು ಹಾರಿದಾಗ, ಯುದ್ಧ ಟ್ಯಾಂಕರ್‌ಗಳು ಸಂಚರಿಸಿದಾಗ, ದೇಶೀ ಕೊರೋನಾ ಲಸಿಕೆ ಎಲ್ಲರಿಗೂ ತಲುಪಿದಾಗ ನಾವು ತಲೆಯೆತ್ತಿ ನಿಲ್ಲುತ್ತೇವೆ’ ಎಂದು ಹರ್ಷಿಸಿದರು. ಹೀಗೆ ಇತರ ಕ್ಷೇತ್ರಗಳಲ್ಲೂ ಆತ್ಮನಿರ್ಭರತೆ ಸಾಧಿಸಬೇಕು ಎಂದು ಕರೆಯಿತ್ತರು.

ಇದೇ ವೇಳೆ, ಸಿ.ವಿ. ರಾಮನ್‌ ಅವರನ್ನು ವಿಜ್ಞಾನ ದಿನದ ಅಂಗವಾಗಿ ಸ್ಮರಿಸಿದರು. ಪರೀಕ್ಷೆಗಳು ಹತ್ತಿರ ಆಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ‘ಪರೀಕ್ಷಾ ಯೋಧರು’ ಎಂದು ಬಣ್ಣಿಸಿದ ಮೋದಿ, ಮಾಚ್‌ರ್‍ನಲ್ಲಿ ತಾವು ನಡೆಸಲಿರುವ ‘ಪರೀಕ್ಷಾ ಪೇ ಚರ್ಚಾ’ದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ತಮಿಳು ಭಾಷೆ ಕಲಿಯಲು ಆಗಲಿಲ್ಲ: ಮೋದಿ ಬೇಸರ!

ತಮಿಳು ಬಾರದ್ದಕ್ಕೆ ಕ್ಷಮೆ ಕೇಳುವೆ: ಅಮಿತ್‌

ನವದೆಹಲಿ: ತಮಿಳು ಅತ್ಯಂತ ಸುಂದರ ಭಾಷೆ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಯಾದ ಅದನ್ನು ಕಲಿಯಲು ನನಗೆ ಆಗಲಿಲ್ಲ. ಈ ನಿಟ್ಟಿನಲ್ಲಿ ನಾನು ಸಾಕಷ್ಟುಪ್ರಯತ್ನ ಪಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

ಮತ್ತೊಂದೆಡೆ, ತಮಿಳುನಾಡಿನಲ್ಲಿ ಬಿಜೆಪಿ ರಾರ‍ಯಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿಶ್ವದ ಅತಿ ಪುರಾತನ ಹಾಗೂ ದೇಶದ ಅತ್ಯಂತ ಸವಿಯಾದ ಭಾಷೆ ತಮಿಳಿನಲ್ಲಿ ಮಾತನಾಡಲು ಆಗದ್ದಕ್ಕೆ ಬೇಸರವಾಗುತ್ತಿದೆ. 

ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.