* ಬಹುತೇಕ ಎಲ್ಲ ಜಾತಿಗಳಿಗೆ ಕೇಂದ್ರ ಮಂತ್ರಿಗಿರಿ* ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕಾರ‍್ಯರೂಪ* ಮೋದಿ ಬಳಗದಲ್ಲಿ 6 ವೈದ್ಯರು, 13 ವಕೀಲರು, 7 ಐಎಎಸ್‌ಗಳು, 5 ಎಂಜಿನಿಯರ್
ನವದೆಹಲಿ(ಜು.08): ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಂತ್ರಿಮಂಡಲವನ್ನು ಪುನಾರಚಿಸಿದ್ದು, ಈ ಪ್ರಕ್ರಿಯೆಯಲ್ಲಿ ನಾನಾ ಅಂಶಗಳನ್ನು ಪರಿಗಣಿಸಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಯುವ ಸಂಪುಟ, ಮಹಿಳೆಯರಿಗೆ ಹೆಚ್ಚಿನ ಮಣೆ, ವಿಷಯವಾರು ತಜ್ಞರು, ಹಲವು ವರ್ಷಗಳಿಂದ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ಭಾಗಿಯಾದವರು, ಸರ್ಕಾರವನ್ನು ಸಮರ್ಥಿಸಿಕೊಂಡವರು, ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಯ ಸುಳಿವು ನೀಡಿರುವವರು, ಮುಂದಿನ ದಿನಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು ಹೀಗೆ ನಾನಾ ವಿಷಯಗಳನ್ನು ಪರಿಗಣಿಸಲಾಗಿದೆ.
ಎಸ್ಸಿ,ಎಸ್ಟಿ, ಒಬಿಸಿಗೆ ಮಣೆ:
ನೂತನ ಮಂತ್ರಿಮಂಡಲದಲ್ಲಿ 12 ಪರಿಶಿಷ್ಟಜಾತಿ, 8 ಪರಿಶಿಷ್ಟಪಂಗಡ ಹಾಗೂ 27 ಇತರ ಹಿಂದುಳಿದ ವರ್ಗ (ಒಬಿಸಿ) ಸಚಿವರಿಗೆ ಅವಕಾಶ ಕಲ್ಪಿಸಲಾಗಿದೆ. 12 ಪರಿಶಿಷ್ಟಜಾತಿಯ ಸಚಿವರಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಮಧ್ಯಪ್ರದೇಶ, ಪ.ಬಂಗಾಳ, ರಾಜಸ್ಥಾನ ಹಾಗೂ ಮಹಾರಾಷ್ಟ್ರಕ್ಕೆ ಪ್ರಾತಿನಿಧ್ಯ ದೊರಕಿದೆ. 8 ಎಸ್‌ಟಿ ಸಚಿವರಲ್ಲಿ ಅರುಣಾಚಲ ಪ್ರದೇಶ, ಜಾರ್ಖಂಡ ಸೇರಿದಂತೆ 8 ರಾಜ್ಯಗಳ ಪ್ರತಿನಿಧಿಗಳಿದ್ದಾರೆ. 27 ಒಬಿಸಿ ಸಚಿವರಲ್ಲಿ ವಿವಿಧ ರಾಜ್ಯಗಳ ಸಚಿವರು ಇರಲಿದ್ದು, ಇದರಲ್ಲಿ ಕರ್ನಾಟಕದ ತುಳು ಗೌಡ ಸಮುದಾಯದವರೂ ಇದ್ದಾರೆ. ಸಂಪುಟ ದರ್ಜೆಯ ಐವರು ಸಚಿವರು ಇವರಲ್ಲಿದ್ದಾರೆ. 29 ಸಚಿವರು ಬ್ರಾಹ್ಮಣ, ಬನಿಯಾ, ಮರಾಠ, ಲಿಂಗಾಯತ, ಕ್ಷತ್ರಿಯ ಸೇರಿದಂತೆ ಇತರ ಸಮುದಾಯದವರಾಗಿದ್ದಾರೆ.
ಮಹಿಳೆಯರಿಗೆ ಮನ್ನಣೆ: 11 ಮಹಿಳಾ ಸಚಿವರು ಇರಲಿದ್ದು, ಇವರಲ್ಲಿ ಇಬ್ಬರು ಸಂಪುಟ ದರ್ಜೆ ಸಚಿವೆಯರು.
ಎಲ್ಲಾ ಸಮುದಾಯಕ್ಕೂ ಮಣೆ:
ಯಾದವ, ಗುಜ್ಜರ್, ಕುರ್ಮಿ, ದರ್ಜಿ, ಬೈರಾಗಿ, ಠಾಕೂರ್, ಕೋಲಿ, ತುಳು ಗೌಡ, ಮಲ್ಲ ಮೊದಲಾದ ಜಾತಿಯವರು ಮೋದಿ ಅವರ ‘ಆಪ್ತ ಟೀಮ್’ನಲ್ಲಿ ಇರಲಿದ್ದಾರೆ. ಈ ಮೂಲಕ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ತಮ್ಮ ಘೋಷಣೆಯನ್ನು ಕಾರ್ಯರೂಪಕ್ಕೆ ತರುವತ್ತ ಮೋದಿ ಹೆಜ್ಜೆ ಇರಿಸಿದ್ದಾರೆ.
ಕರ್ನಾಟಕದ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ
ಸಂಪುಟ ವಿಸ್ತರಣೆ ಬಳಿಕ ಕರ್ನಾಟಕದ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಹಳೇ ಮೈಸೂರು, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಕರಾವಳಿ/ಮಲೆನಾಡು ಭಾಗಕ್ಕೆ ಸಚಿವಗಿರಿ ದೊರಕಿದೆ.
ಸಚಿವರ ವಯಸ್ಸು
- ಮೋದಿ ಮಂತ್ರಿಮಂಡಲ ಸಚಿವರ ಸರಾಸರಿ ವಯಸ್ಸು 58
- 14 ಸಚಿವರ ವಯಸ್ಸು 50ಕ್ಕಿಂತ ಕೆಳಗಿದೆ
- 46 ಸಚಿವರಿಗೆ ಈ ಹಿಂದೆ ಮಂತ್ರಿಯಾಗಿದ್ದ ಅನುಭವ
- 23 ಸಚಿವರಿಗೆ 3ಕ್ಕಿಂತ ಹೆಚ್ಚು ಸಲ ಸಂಸದರಾಗಿದ್ದ ಅನುಭವ
- 4 ಮಂದಿ ಮಾಜಿ ಮುಖ್ಯಮಂತ್ರಿಗಳು
- 8 ಮಂದಿ ರಾಜ್ಯ ದರ್ಜೆಯ ಮಾಜಿ ಸಚಿವರು
- 39 ಮಂದಿ ಮಾಜಿ ಶಾಸಕರು
- 13 ಮಂದಿ ವಕೀಲರು, 6 ವೈದ್ಯರು, 5 ಎಂಜಿನಿಯರ್‌ಗಳು, 7 ನಾಗರಿಕ ಸೇವೆ ಅಧಿಕಾರಿಗಳು
