ನವದೆಹಲಿ(ಅ.15): ಭಾರತದ 11ನೇ ರಾಷ್ಟ್ರಪತಿ ಹಾಗೂ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂರವರ ಹುಟ್ಟುಹಬ್ಬ. 1931ರ ಆಗಸ್ಟ್ 15ರಂದು ರಾಮೇಶ್ವರಂನಲ್ಲಿ ಜನಿಸಿದ ಡಾ. ಕಲಾಂ 'ಕ್ಷಿಪಣಿ ಮಾನವ' ರೆಂದೇ ಪ್ರಸಿದ್ಧಿ ಗಳಿಸಿದ್ದಾರೆ. ಅಬ್ದುಲ್ ಕಲಾಂ ಅವರು ದೇಶ ಕಂಡ ಶ್ರೇಷ್ಠ ವಿಜ್ಞಾನಿ, ನೆಚ್ಚಿನ ಶಿಕ್ಷಕ, ಮೇಧಾವಿ, ರಾಜಕಾರಣಿಯೂ ಹೌದು. 

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಈ ಧೀಮಂತ ನಾಯಕನಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶ್ವಸಂಸ್ಥೆಯು 2010ರಲ್ಲಿ ಅಕ್ಟೋಬರ್ 15ನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಘೋಷಿಸಿತು. ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್ 15ನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೊತೆಗೆ ಕಲಾಂ ಅವರನ್ನು ಸ್ಮರಿಸಲಾಗುತ್ತದೆ. ಅವರ ಜನ್ಮ ಜಯಂತಿಯಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಅನೇಕ ಗಣ್ಯರು ಅವರನ್ನು ನೆನಪಿಸಿಕೊಂಡಿದ್ದಾರೆ. 

ಅಬ್ದುಲ್ ಕಲಾಂ ಜನ್ಮ ದಿನದ ಪ್ರಯುಕ್ತ ಟ್ವೀಟ್ ಮಾಡಿರುವ ಪಿಎಂ ಮೋದಿ 'ಡಾ. ಕಲಾಂರವರ ಜನ್ಮ ಜಯಂತಿಯಂದು ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಓರ್ವ ರಾಷ್ಟ್ರಪತಿಯಾಗಿ ಹಾಗೂ ವಿಜ್ಞಾನಿಯಾಗಿ ಭಾರತದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಯಾರೂ ಮರೆಯುವಂತಿಲ್ಲ. ಅವರ ಜೀವನ ಪಯಣ ಲಕ್ಷಾಂತರ ಮಂದಿಗೆ ದಾರಿದೀಪ, ಬಲ ತುಂಬುತ್ತದೆ' ಎಂದಿದ್ದಾರೆ.

ಇನ್ನು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡುತ್ತಾ 'ಕಲಾಂರಿಗೆ ಅವರ ಜನ್ಮ ಜಯಂತಿಯಂದು ನನ್ನ ನಮನ. ಓರ್ವ ದೂರದೃಷ್ಟಿಯುಳ್ಳ ನಾಯಕ, ಭಾರತದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮವನ್ನು ನಿರ್ಮಿಸಿದವರು ಹಾಗೂ ಒಂದು ಬಲಶಾಲಿ ಹಾಗೂ ಆತ್ಮ ನಿರ್ಭರ ಭಾರತವನ್ನಾಗಬಯಸಿದವರು. ವಿಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಕಜ್ಕೆ ಅವರು ನೀಡಿದ ಕೊಡುಗೆ ಪ್ರತಿಯೊಬ್ಬರಿಗೂ ಪ್ರೇರಣೆ' ಎಂದಿದ್ದಾರೆ.