ಕೊಕ್ರಾಝರ್(ಫೆ.07): ಇಡೀ ದೇಶದ ಜನತೆ ತಮ್ಮ ಬೆಂಬಲಕ್ಕಿದ್ದು, ವಿರೋಧಿಗಳ 'ಡಂಡಾ' ಭಯ ತಮಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನನ್ನ ಮೇಲೆ ದಾಳಿ ಮಾಡುವ ಭಯದಿಂದ ದೂರವಾಗಿರುವುದಾಗಿ ಅವರು ನುಡಿದರು.

ಅಸ್ಸಾಂನ ಕೊಕ್ರಾಝರ್'ನಲ್ಲಿ ನಡೆದ ಐತಿಹಾಸಿಕ ಶಾಂತಿ ಒಪ್ಪಮದ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬೋಡೋ ಶಾಂತಿ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿದರು.

ಶಸ್ತ್ರಾಸ್ತ್ರಗಳನ್ನು ಬದಿಗಿರಿಸಿ ಮುಖ್ಯಧಾರೆಗೆ ಬಂದ ಬೋಡೋ ಪ್ರತ್ಯೇಕತಾವಾದಿಗಳಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ಇಡೀ ದೇಶ ಇಂದು ನಿಮ್ಮೊಂದಿಗೆ ಸಂಭ್ರಮಿಸುತ್ತಿದೆ ಎಂದು ಹೇಳಿದರು.

ಬೋಡೋ ಶಾಂತಿ ಒಪ್ಪಂದದಿಂದಾಗಿ ಸಂಪೂರ್ಣ ಈಶಾನ್ಯ ಭಾರತ ಇದೀಗ ಅಭಿವೃದ್ಧಿ ಎಂಬ ರೈಲಿನ ಇಂಜಿನ್ ಆಗಿ ಪರಿವರ್ತನೆಗೊಂಡಿದೆ. ಅಭಿವೃದ್ಧಿಯ ಹೊಸ ಅಧ್ಯಾಯವೊಂದನ್ನು ಈಶಾನ್ಯ ಭಾರತ ಬರೆಯಲಿದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು.

ಇಡೀ ದೇಶ ಮಹಾತ್ಮಾ ಗಾಂಧಿಜೀ ಅವರ 150ನೇ ಜನ್ಮ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ಬೋಡೋ ಶಾಂತಿ ಒಪ್ಪಂದ ಕಾರ್ಯರೂಪಕ್ಕೆ ಬಂದಿದ್ದು ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ಮೋದಿ ನುಡಿದರು.

ಈಶಾನ್ಯ ರಾಜ್ಯಗಳೂ ಸೇರಿದಂತೆ ಇಡೀ ಭಾರತ ತಮ್ಮ ಬೆಂಬಲಕ್ಕೆ ನಿಂತಿದ್ದು, ತಮ್ಮನ್ನು ಬಡಿಗೆಗಳಿಂದ ಬಡಿಯಲು ಹುನ್ನಾರ ನಡೆಸಿರುವ ವಿರೋಧಿಗಳ ಭಯ ತಮಗಿಲ್ಲ ಎಂದು ಪ್ರಧಾನಿ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಚುಚ್ಚಿದರು.

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ