ನವದೆಹಲಿ(ಅ.21): ದೇಶದೆಲ್ಲೆಡೆ ತೀವ್ರ ಸ್ವರೂಪದ ಕೊರೋನಾ ರೋಗಿಗಳಿಗೆ ಚಿಕಿತ್ಸೆಯಾಗಿ ಬಳಸುತ್ತಿರುವ ಕಾನ್ವಲೆಸೆಂಟ್‌ ಪ್ಲಾಸ್ಮಾ ಥೆರಪಿ (ಪ್ಲಾಸ್ಮಾ ಚಿಕಿತ್ಸೆ)ಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಕೈಬಿಡುವ ಸಾಧ್ಯತೆಯಿದೆ. ಕೋವಿಡ್‌-19 ಚಿಕಿತ್ಸೆಯ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಡುವ ಬಗ್ಗೆ ರಾಷ್ಟ್ರೀಯ ಕೋವಿಡ್‌-19 ಟಾಸ್ಕ್‌ಫೋರ್ಸ್‌ನಲ್ಲಿ ಚರ್ಚೆ ನಡೆಯುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ಮಹಾಪ್ರಧಾನ ನಿರ್ದೇಶಕ ಪ್ರೊ.ಬಲರಾಂ ಭಾರ್ಗವ ತಿಳಿಸಿದ್ದಾರೆ.

ಪ್ಲಾಸ್ಮಾ ಥೆರಪಿಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಕೊರೋನಾ ರೋಗಿಗಳ ಸಾವಿನ ಪ್ರಮಾಣ ಕೊಂಚವೂ ಕಡಿಮೆಯಾಗಿಲ್ಲ ಎಂದು ಈ ಹಿಂದೆಯೇ ಐಸಿಎಂಆರ್‌ ಹೇಳಿತ್ತು. ಆದರೂ ಬಹುತೇಕ ರಾಜ್ಯಗಳಲ್ಲಿ ಇದನ್ನು ಕೊರೋನಾ ಚಿಕಿತ್ಸೆಗೆ ಒಂದು ವಿಧಾನವಾಗಿ ಬಳಸಲಾಗುತ್ತಿತ್ತು. ಇದೀಗ ಇದನ್ನು ಸಂಪೂರ್ಣ ಕೈಬಿಡುವ ಸಾಧ್ಯತೆ ವ್ಯಕ್ತವಾಗಿದೆ.

ಈಗಲೂ ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿ ಎಂದು ರಾಜ್ಯ ಸರ್ಕಾರಗಳು ಮೇಲಿಂದ ಮೇಲೆ ಕರೆ ನೀಡುತ್ತಿವೆ. ದೆಹಲಿ ಮುಂತಾದ ರಾಜ್ಯಗಳಲ್ಲಿ ಪ್ಲಾಸ್ಮಾ ಬ್ಯಾಂಕ್‌ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ. ಈಗ ಈ ಚಿಕಿತ್ಸೆಯನ್ನು ಕೈಬಿಟ್ಟರೆ ರಾಜ್ಯಗಳಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಈ ವರ್ಷದ ಏಪ್ರಿಲ್‌ ಹಾಗೂ ಜುಲೈ ನಡುವೆ ದೇಶದ 39 ಆಸ್ಪತ್ರೆಗಳಲ್ಲಿ 464 ರೋಗಿಗಳನ್ನು ಪ್ಲಾಸ್ಮಾ ಥೆರಪಿಗೆ ಒಳಪಡಿಸಿ ಐಸಿಎಂಆರ್‌ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿತ್ತು. ಆ ಅಧ್ಯಯನದಲ್ಲೂ ಇದು ನಿಷ್ೊ್ರಯೋಜಕ ಚಿಕಿತ್ಸೆ ಎಂಬ ಫಲಿತಾಂಶ ಬಂದಿತ್ತು.