ದೇಶಾದ್ಯಂತ ಹಲಾಲ್‌ ಉತ್ಪನ್ನ ನಿಷೇಧ ಕೋರಿ ಸುಪ್ರೀಂಗೆ ಅರ್ಜಿ

*ದೇಶಾದ್ಯಂತ ಹಲಾಲ್‌ ಉತ್ಪನ್ನ ನಿಷೇಧ ಕೋರಿ ಸುಪ್ರೀಂಗೆ ಅರ್ಜಿ
*85% ಜನರ ಮೇಲೆ ಹಲಾಲ್‌ ಉತ್ಪನ್ನ ಹೇರಲಾಗುತ್ತಿದೆ: ಪಿಐಎಲ್‌

PIL In Supreme Court Seeks Nationwide Ban On Halal Products mnj

ನವದೆಹಲಿ (ಏ. 23): ಕರ್ನಾಟಕದಲ್ಲಿ ಹಲಾಲ್‌ (Halal) ಹಾಗೂ ಝಟ್ಕಾ ಮಾಂಸದ ವಿವಾದ ತಣ್ಣಗಾಗುತ್ತಿರುವ ಹೊತ್ತಿನಲ್ಲೇ ದೇಶಾದ್ಯಂತ ಹಲಾಲ್‌ ಉತ್ಪನ್ನಗಳನ್ನು ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಚ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಕೆಯಾಗಿದೆ. ‘ದೇಶದಲ್ಲಿ 15% ಮಾತ್ರ ಇರುವ ಮುಸ್ಲಿಂ ಅಲ್ಪಸಂಖ್ಯಾತರಿಗೆ ಹಲಾಲ್‌ ಆಹಾರ ಬೇಕು ಎಂಬ ಕಾರಣಕ್ಕೆ 85% ಇರುವ ಇತರ ಜನಾಂಗಗಳ ಬಹುಸಂಖ್ಯಾತರ ಮೇಲೆ ಹಲಾಲ್‌ ಉತ್ಪನ್ನಗಳನ್ನು ಹೇರಲಾಗುತ್ತಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

ವಕೀಲ ವಿಭೋರ್‌ ಆನಂದ್‌ ಎಂಬುವರು ಹಲಾಲ್‌ ಉತ್ಪನ್ನಗಳು ಹಾಗೂ ಹಲಾಲ್‌ ಪ್ರಮಾಣೀಕರಣವನ್ನು ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ‘ಹಲಾಲ್‌ ಉತ್ಪನ್ನಗಳನ್ನು ಮಾರಾಟ ಮಾಡುವುದು ಸಂವಿಧಾನದ 14 ಹಾಗೂ 21ನೇ ವಿಧಿಯ ಉಲ್ಲಂಘನೆಯಾಗಿದೆ. ದೇಶದಲ್ಲಿ 1974ರಲ್ಲಿ ಹಲಾಲ್‌ ಪ್ರಮಾಣೀಕರಣ ವ್ಯವಸ್ಥೆ ಆರಂಭವಾಯಿತು. ಮೊದಲಿಗೆ ಇದು ಮಾಂಸದ ಉತ್ಪನ್ನಗಳಿಗೆ ಸೀಮಿತವಾಗಿತ್ತು.

ಇದನ್ನೂ ಓದಿ: ಹಲಾಲ್‌ ಎಂಬ ಬಿಜೆಪಿಗರು ಈಗ ಚುನಾವಣೆಗೆ ಬರಲಿ, ಡಿಕೆಶಿ ಸವಾಲ್!

ಈಗ ಫಾರ್ಮಾಸ್ಯುಟಿಕಲ್ಸ್‌, ಕಾಸ್ಮೆಟಿಕ್ಸ್‌, ಆರೋಗ್ಯ ಉತ್ಪನ್ನಗಳು, ಟಾಯ್ಲೆಟರಿ, ವೈದ್ಯಕೀಯ ಉಪಕರಣಗಳಿಗೂ ಹಲಾಲ್‌ ಪ್ರಮಾಣೀಕರಣ ನೀಡಲಾಗುತ್ತಿದೆ. ಅಷ್ಟೇಕೆ, ಹಲಾಲ್‌ ಸ್ನೇಹಿ ಪ್ರವಾಸೋದ್ಯಮ, ಮೆಡಿಕಲ್‌ ಟೂರಿಸಂ, ಉಗ್ರಾಣ ಪ್ರಮಾಣೀಕರಣ, ಹಲಾಲ್‌ ರೆಸ್ಟೋರೆಂಟ್‌ಗಳು, ಹಲಾಲ್‌ ಟ್ರೇನಿಂಗ್‌ ಇತ್ಯಾದಿಗಳು ಕೂಡ ಆರಂಭವಾಗಿವೆ. ಕೊನೆಗೆ ಸರಕು ಸಾಗಣೆ, ಮಾಧ್ಯಮ, ಬ್ರ್ಯಾಂಡಿಂಗ್‌ ಹಾಗೂ ಮಾರ್ಕೆಟಿಂಗ್‌ಗೂ ಹಲಾಲ್‌ ಕಾಲಿಟ್ಟಿದೆ’ ಎಂದು ಅರ್ಜಿಯಲ್ಲಿ ಆಪಾದಿಸಿದ್ದಾರೆ.

‘ದೇಶಾದ್ಯಂತ ಹಲಾಲ್‌ ಉತ್ಪನ್ನಗಳನ್ನು ಹಾಗೂ ಹಲಾಲ್‌ ಪ್ರಮಾಣೀಕರಣವನ್ನು ನಿಷೇಧಿಸಬೇಕು. ಕೆಎಫ್‌ಸಿ, ನೆಸ್ಲೆ, ಬ್ರಿಟಾನಿಯಾ ಇತ್ಯಾದಿ ಕಂಪನಿಗಳಿಗೆ ಹಲಾಲ್‌ ಪ್ರಮಾಣಿತ ಆಹಾರಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಸೂಚಿಸಬೇಕು. ಆಹಾರೋತ್ಪನ್ನಗಳಿಗೆ ಪ್ರಮಾಣೀಕರಣ ನೀಡಲೆಂದೇ ಸರ್ಕಾರದ ಆಹಾರ ಸುರಕ್ಷತೆ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇರುವಾಗ ಅನಧಿಕೃತ ಹಲಾಲ್‌ ಪ್ರಮಾಣೀಕರಣ ವ್ಯವಸ್ಥೆ ಏಕಿರಬೇಕು?’ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಜಟ್ಕಾ ಕಟ್‌ ಎಂದರೇನು?: ಜಟ್ಕಾ ಕಟ್‌ ವಿಧಾನದಲ್ಲಿ ಪ್ರಾಣಿ, ಪಕ್ಷಿಗೆ ಯಾವುದೇ ರೀತಿಯ ಹಿಂಸೆಯಾಗದಂತೆ ಒಮ್ಮೆಗೆ ಅದರ ಕತ್ತನ್ನು ಕತ್ತರಿಸಬೇಕು. ಯಾವುದೇ ಕಾರಣಕ್ಕೂ ಕತ್ತನ್ನು ಅರ್ಧ ಭಾಗ ಸೀಳಿ ಪ್ರಾಣಿಗೆ ಹಿಂಸೆ ನೀಡುವಂತಿಲ್ಲ. ಹಿಂದು ವ್ಯಕ್ತಿಯು, ಹಿಂದು ದೇವರ ಸ್ಮರಣೆಯೊಂದಿಗೆ ಬಲಿ ಕೊಡಬೇಕು.

ಇದನ್ನೂ ಓದಿ: ಹಿಜಾಬ್‌, ಹಲಾಲ್‌ ಬಳಿಕ ಈಗ ಮಸೀದಿಗಳ ಮೈಕ್‌ ವಿರುದ್ಧ ಹಿಂದೂ ಸಂಘಟನೆಗಳ ಕಿಚ್ಚು!

ಹಲಾಲ್‌ ಕಟ್‌ ಎಂದರೇನು?: ಪ್ರಾಣಿ, ಪಕ್ಷಿಯನ್ನು ಕೊಲ್ಲುವುದಕ್ಕೂ ಮುನ್ನ ಪಾಲಿಸುವ ನಿಯಮವೇ ಹಲಾಲ್‌. ಮೊದಲು ಪ್ರಾಣಿಗೆ ನೀರು ಕುಡಿಸಿ, ಬಳಿಕ ಮೆಕ್ಕಾದತ್ತ ಮುಖ ಮಾಡಿ ವಧಿಸಬೇಕು. ತಲೆ ಸಂಪೂರ್ಣ ಕತ್ತರಿಸದೆ ಗಂಟಲು ಸೀಳಿ ಸಾಯಿಸಬೇಕು. ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಲು ಬಿಡಬೇಕು. ವಧಿಸುವ ವ್ಯಕ್ತಿಯು ಮುಸ್ಲಿಂ ಆಗಿರಬೇಕು ಮತ್ತು ಅಲ್ಲಾನ ನಾಮೋಚ್ಚಾರ ಮಾಡುತ್ತಾ ವಧಿಸಬೇಕು. ವಧಿಸುವ ಮೊದಲೇ ಪ್ರಾಣಿ ಸತ್ತಿರಬಾರದು. ಈ ರೀತಿ ಧರ್ಮಬದ್ಧವಾಗಿ ಸಿದ್ಧಪಡಿಸಿದ್ದು ಹಲಾಲ್‌ ಮಾಂಸವಾಗಿರುತ್ತದೆ.

Latest Videos
Follow Us:
Download App:
  • android
  • ios