* ಪುಟ್ಟ ಬಾಲಕನಿಂದ ಹಿಂದೂ ಮತ್ತು ಕ್ರೈಸ್ತರ ವಿರುದ್ಧ ಎಚ್ಚರಿಕೆ ಸ್ವರೂಪದ ಘೋಷಣೆ* ಗೌರವಯುತವಾಗಿದ್ದರೆ ನಮ್ಮ ಜಾಗದಲ್ಲಿ ನೀವು ಬಾಳಬಹುದು* ಇಲ್ಲದಿದ್ದರೆ ಆಹಾರ ಸಿದ್ಧವಾಗಿಡಿ, ಮನೆಗೆ ಯಮ ಬರುತ್ತಾನೆ!
ಅಲಪ್ಪುಳ(ಮೇ.24): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಸ್ಲಿಂ ಸಂಘಟನೆ ಕಳೆದ ಶನಿವಾರ ಇಲ್ಲಿ ಆಯೋಜಿಸಿದ್ದ ಬೃಹತ್ ರಾರಯಲಿ ವೇಳೆ ಪುಟ್ಟಬಾಲಕನೊಬ್ಬ ಹಿಂದೂ ಮತ್ತು ಕ್ರೈಸ್ತರ ವಿರುದ್ಧ ಎಚ್ಚರಿಕೆ ಸ್ವರೂಪದ ಘೋಷಣೆ ಕೂಗಿದ ಆತಂಕಕಾರಿ ಬೆಳವಣಿಗೆ ನಡೆದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಕ್ಕಳ ಹಕ್ಕು ಆಯೋಗದ ಮುಖ್ಯಸ್ಥೆ ಪ್ರಿಯಾಂಕಾ, ಮಕ್ಕಳನ್ನು ಇಂಥ ಕೃತ್ಯಗಳಿಗೆ ಬಳಸಿಕೊಳ್ಳುವುದು ಬಾಲಪರಾಧ ನ್ಯಾಯ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ಏನು ಘೋಷಣೆ?:
ರಾರಯಲಿಯಲ್ಲಿ ವ್ಯಕ್ತಿಯೊಬ್ಬನ ಹೆಗಲ ಮೇಲೆ ಕುಳಿತಿದ್ದ ಪುಟ್ಟಬಾಲಕನೊಬ್ಬ ‘ಆಹಾರವನ್ನು ಸಿದ್ಧಪಡಿಸಿಡಿ. ಯಮ ನಿಮ್ಮ ಮನೆ ಬಾಗಿಲಿಗೆ ಬರುತ್ತಾನೆ. ನೀವು ಇಲ್ಲಿ ಗೌರವಯುತವಾಗಿ ಬಾಳಿದರೆ, ನಮ್ಮ ಜಾಗದಲ್ಲಿ ವಾಸಿಸಬಹುದು. ಇಲ್ಲದೇ ಹೋದಲ್ಲಿ, ಏನಾಗುತ್ತದೆಯೋ ನಮಗೆ ಗೊತ್ತಿಲ್ಲ’ ಎಂದು ಹಿಂದೂ, ಕ್ರೈಸ್ತರ ವಿರುದ್ಧ ಘೋಷಣೆ ಕೂಗಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟುಟೀಕೆಗೆ ಗ್ರಾಸವಾಗುತ್ತಲೇ ಪ್ರತಿಕ್ರಿಯಿಸಿರುವ ಪಿಎಫ್‌ಐ ವಕ್ತಾರ ರೌಫ್ ಪಟ್ಟಾಂಬಿ, ‘ನಾವು ಆಯೋಜಿಸಿದ್ದ ಸಮ್ಮೇಳನದಲ್ಲಿ ಈ ಘೋಷಣೆ ಕೂಗಿಲ್ಲ. ಅದನ್ನು ಕೂಗಿರುವುದು ಸಾವಿರಾರು ಜನ ಭಾಗಿಯಾಗಿದ್ದ ರಾರಯಲಿಯಲ್ಲಿ. ಜೊತೆಗೆ ಘೋಷಣೆ ಕೂಗಿದ್ದು ಕೂಡಾ ಹಿಂದೂ ಮತ್ತು ಕ್ರೈಸ್ತರ ವಿರುದ್ಧವಲ್ಲ. ಬದಲಾಗಿ ಹಿಂದುತ್ವವಾದಿ ಉಗ್ರರು ಮತ್ತು ಮತೀಯ ಶಕ್ತಿಗಳ ವಿರುದ್ಧ. ಕೆಲವರು ಹಿಂದೂ ಭಯೋತ್ಪಾದನೆ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಬಾಲಕ ಕೂಡಾ ಅಂಥದ್ದೇ ಘೋಷಣೆ ಕೂಗಿದ್ದಾನೆ. ಅಲ್ಲಿ ಬಳಸಿದ ಕೆಲ ಪದಗಳ ಬಗ್ಗೆ ನಮಗೆ ವಿಷಾದವಿದೆ’ ಎಂದು ಸಮಜಾಯಿಷಿ ನೀಡುವ ಯತ್ನ ಮಾಡಿದ್ದಾರೆ.
