ಡೆಲ್ಲಿಮಂಜು

ನವದೆಹಲಿ(ಅ.27) : ಮಹಾಮಾರಿ ಕೊರೊನಾಗೆ ಹೆದರಿ ಸಾವಿರಾರು ಕಿಲೋಮಿಟರ್ ನಡೆದುಕೊಂಡೇ ಬಂದು ಊರು ಸೇರಿದ್ದ ವಲಸೆ ಕಾರ್ಮಿಕರು, ಕೈಗೊಂದು ಕೆಲಸ ಇಲ್ಲ ಅಂಥ ಕೈಕಟ್ಟಿ ಕುಳಿತಿರುವ ನಿರುದ್ಯೋಗಿ ಯುವಕರು, 15 ವರ್ಷಗಳ ನಿತೀಶ್ ನೇತೃತ್ವದಲ್ಲಿ ಬಿಹಾರದ ಆಡಳಿತದ ವಿರುದ್ಧ ಕೆಂಡಾಕಾರುತ್ತಿರುವ ವಿರೋಧಿಗಳು ಬುಧವಾರ 71 ಮಂದಿಯ ಹಣೆ ಬರಹ ಬರೆಯಲಿದ್ದಾರೆ.

ಫ್ರೀ ವ್ಯಾಕ್ಸಿನ್, ಕೋಟಿ ಕೋಟಿ ಉದ್ಯೋಗಗಳ ಭರವಸೆಯನ್ನು ಕೂಗಿ ಕೂಗಿ ಹೇಳುತ್ತಿರುವ ಯಾದವರ ನಾಡು ಬಿಹಾರದಲ್ಲಿ ಬುಧವಾರ ಮೊದಲ ಹಂತದ ಮತದಾನ ನಡೆಯಲಿದೆ. ಕೊರೊನಾ ಮಹಾಮಾರಿಯ ವೇಳೆಯಲ್ಲಿ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದ್ದು, 16 ಜಿಲ್ಲೆಗಳಲ್ಲಿ ಒಟ್ಟು 243 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ 71 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 1,066 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು 71 ಮಂದಿ ಆಯ್ಕೆಯಾಗಲಿದ್ದಾರೆ.

ಬಿಜೆಪಿ ಪೋಸ್ಟರ್‌ನಲ್ಲಿ ನಿತೀಶ್‌ ಫೋಟೋನೇ ಇಲ್ಲ!

ಮೊದಲ ಹಂತದ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮೂರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿ ಮಾತನಾಡಿದರೆ, ಎನ್‍ಡಿಎ ನಾಯಕರು ಹಾಗು ಬಿಹಾರ್ ಸಿಎಂ ಆಗಿರುವ ನಿತೇಶ್ ಕುಮಾರ್, ಹಲವು ಕೇಂದ್ರ ಸಚಿವರು ವಿವಿಧ ಕಡೆ ಚುನಾವಣಾ ಪ್ರಚಾರ ನಡೆಸಿದ್ದಾರೆ.. ಇತ್ತ ವಿರೋಧ ಪಕ್ಷಗಳ ಪಡೆಯ ಪ್ರಮುಖ ಅನ್ನಿಸಿಕೊಂಡಿರುವ ಲೂಲು ಯಾದವ್ ಪುತ್ರ ತೇಜಸ್ವಿಯಾದವ್ ಹೆಚ್ಚು ಕಡಿಮೆ 71 ವಿಧಾನಸಭಾ ಕ್ಷೇತ್ರಗಳನ್ನೂ ಓಡಾಡಿಕೊಂಡು ಬಂದಿದ್ದಾರೆ.

ಮಾಜಿ ಸಿಎಂ ಜಿತಿನ್ ರಾಮ್, ಮಾಜಿ ಸ್ಪೀಕರ್ ಉದೈ ನರಯನ್ ಚೌದರಿ, ಇತ್ತೀಚೆಗೆ ಬಿಜೆಪಿಯಿಂದ ಉಚ್ಛಾಟನೆಗೊಂಡು ಚಿರಾಗ್ ಪಾಸ್ವಾನ್ ಪಕ್ಷದಿಂದ ಸ್ಪರ್ಧಿಸಿರುವ ರಾಜೇಂದ್ರ ಸಿಂಗ್, ಹಾಲಿ ನಿತೇಶ್ ಕುಮಾರ್ ಸರ್ಕಾರದ ಆರು ಮಂದಿ ಸಚಿವರು, ಬಿಜೆಪಿ ಪಕ್ಷದಿಂದ 29 ವರ್ಷದ ಶ್ರೇಯಸ್ ಸಿಂಗ್ ಮುಂತಾದರು ಚುನಾವಣಾ ಕಣದಲ್ಲಿದ್ದಾರೆ.

ಮತ್ತೊಂದು ಸಮೀಕ್ಷೆಯಲ್ಲೂ ಎನ್‌ಡಿಎಗೆ ಜಯ!

ಒಟ್ಟು 71 ವಿಧಾನಸಭಾ ಕ್ಷೇತ್ರಗಳು, 1,066 ಮಂದಿ ಅಭ್ಯರ್ಥಿಗಳು, 114 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್‍ಜೆಡಿ-42, ಜೆಡಿಯು-41, ಬಿಜೆಪಿ-29, ಕಾಂಗ್ರೆಸ್-21, ಎಲ್‍ಜೆಪಿ -41 ಅಭ್ಯರ್ಥಿಗಳು ಕಣದಲ್ಲಿದ್ದಾರೆ.