ನವದೆಹಲಿ(ಮೇ.19): ಕೊರೋನಾದಿಂದ ಗುಣಮುಖ ಆದವರಿಗೆ ಲಸಿಕೆಯನ್ನು 9 ತಿಂಗಳ ಅವಧಿ ಬಳಿಕ ನೀಡಬೇಕು ಎಂದು ಸರ್ಕಾರಿ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ರೋಗನಿರೋಧಕತೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಈ ಶಿಫಾರಸು ಮಾಡಿದ್ದು, ಇನ್ನು 1-2 ದಿನದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಈ ಮುನ್ನ ಇದೇ ಸಮಿತಿಯು, ಕೊರೋನಾದಿಂದ ಗುಣಮುಖರಾದವರು 6 ತಿಂಗಳ ಅಂತರದ ಬಳಿಕ ಲಸಿಕೆ ಪಡೆಯಬೇಕು ಎಂಬ ಶಿಫಾರಸು ಮಾಡಿತ್ತು. ಆದರೆ ಈಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಧ್ಯಯನಗಳನ್ನು ಪರಿಶೀಲನೆ ನಡೆಸಿರುವ ಸಮಿತಿ, 6ರ ಬದಲು 9ನೇ ತಿಂಗಳ ನಂತರ ಲಸಿಕೆ ಪಡೆದರೆ ಮರು ಸೋಂಕು ತಾಗುವ ಅಪಾಯ ಇರುವುದಿಲ್ಲ.

ದೇಹದಲ್ಲಿನ ಪ್ರತಿಕಾಯ ಶಕ್ತಿ ವೃದ್ಧಿಸುತ್ತದೆ ಎಂದು ಶಿಫಾರಸಿನಲ್ಲಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು, ಕೊರೋನಾದಿಂದ ಗುಣಮುಖ ಆದವರು 6 ತಿಂಗಳ ಬಳಿಕ ಲಸಿಕೆ ಪಡೆಯಬೇಕು ಎಂದು ಹೇಳಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona