ನವದೆಹಲಿ(ನ.30): ಲಸಿಕೆ ಸಿಗುವವರೆಗೂ ಕೋವಿಡ್‌ ನಿರ್ಬಂಧ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ಬೆನ್ನಲ್ಲೇ, ಮಾಸ್ಕ್‌ ಧರಿಸದೇ ಇದ್ದಿದ್ದಕ್ಕೆ ದಂಡ ವಿಧಿಸುವುದು ಮಾತ್ರವಲ್ಲ ಜೈಲು ಶಿಕ್ಷೆಗೆ ಗುರಿಪಡಿಸುವ ಕಠಿಣ ನಿಯಮವನ್ನು ಹಿಮಾಚಲ ಪ್ರದೇಶ ಸರ್ಕಾರ ಜಾರಿಗೊಳಿಸಿದೆ.

ರಾಜ್ಯ ಸರ್ಕಾರದ ಹೊಸ ಆದೇಶದ ಅನ್ವಯ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೇ ಇದ್ದರೆ ಪೊಲೀಸರು ವಾರೆಂಟ್‌ ಇಲ್ಲದೇ ಬಂಧಿಸಬಹುದಾಗಿದ್ದು, 8 ದಿನಗಳ ಕಾಲ ಜೈಲಿನಲ್ಲಿ ಇಡಬಹುದಾಗಿದೆ. ಜೊತೆಗೆ 5000 ರು.ವರೆಗೂ ದಂಡ ವಿಧಿಸಬಹುದಾಗಿದೆ.

ದೆಹಲಿಯಲ್ಲಿ ಮಾಸ್ಕ್‌ಗೆ ದಂಡದ ಮೊತ್ತವನ್ನು ಇತ್ತೀಚೆಗೆ 2 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಆದರೆ, ಜೈಲು ಶಿಕ್ಷೆ ಜಾರಿ ಮಾಡಿರುವುದು ಇದೇ ಮೊದಲು.