* ಪರ್ಯಾಯ ವಿಚಾರಣೆ, ಚರ್ಚೆ ಬೇಡ:* ಕೋರ್ಟ್‌ ಮೇಲೆ ನಂಬಿಕೆ ಇಡಿ* ಪೆಗಾಸಿಸ್‌ ಅರ್ಜಿದಾರರಿಗೆ ಸುಪ್ರೀಂ ಚಾಟಿ

ನವದೆಹಲಿ(ಆ.11): ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ ಬೇಹುಗಾರಿಕೆ ನಡೆಸಿದ ಪ್ರಕರಣ ಕುರಿತು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವಾಗ, ಅರ್ಜಿ ಸಲ್ಲಿಸಿದವರು ಅದೇ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ‘ಸಮಾನಾಂತರ ವಿಚಾರಣೆ, ಚರ್ಚೆ’ ನಡೆಸುವುದು ಸೂಕ್ತವಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ ‘ಪ್ರಕರಣದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಬೇಕು ಎಂದು ನೀವು ಈಗಾಗಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೀರಿ. ಇಷ್ಟಾದ ಮೇಲೆ ನೀವು ಶಿಸ್ತನ್ನು ಕಾಪಾಡಬೇಕು ಮತ್ತು ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು. ಅದು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಸಮಾನಾಂತರವಾಗಿ ವಿಚಾರಣೆ, ಚರ್ಚೆ ನಡೆಸುವುದು ಸರಿಯಲ್ಲ. ಅರ್ಜಿ ಇಲ್ಲಿ ಸಲ್ಲಿಕೆಯಾದ ಮೇಲೆ ಇಲ್ಲೇ ಚರ್ಚೆ ನಡೆಯಬೇಕೆಂದು ನಾವು ಬಯಸುತ್ತೇವೆ. ನಾವು ಬಯಸಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ ಎಂದು ಹೇಳಿತು.

ಜೊತೆಗೆ ಪ್ರಕರಣ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡುವ ಬಗ್ಗೆ ಆ.16ರಂದು ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ವಿಚಾರಣೆ ಮುಂದೂಡಿತು.

ಕೇಂದ್ರ ಸರ್ಕಾರವು, ವಿಪಕ್ಷ ನಾಯಕರು, ಪತ್ರಕರ್ತರು, ಉದ್ಯಮಿಗಳ ಮೇಲೆ ಇಸ್ರೇಲ್‌ ಮೂಲಕ ಬೇಹುಗಾರಿಕಾ ಸಾಫ್ಟ್‌ವೇರ್‌ ಮೂಲಕ ಕಣ್ಗಾವಲು ಇಟ್ಟಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ಕಣ್ಗಾವಲಿನಲ್ಲಿ ತನಿಖೆಗೆ ಸೂಚಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.