ಕಾಶ್ಮೀರದಲ್ಲಿ 370ನೇ ವಿಧಿ ರದ್ದು ನಿರ್ಧಾರಕ್ಕೆ ನಾಲ್ಕು ವರ್ಷ, ಶಾಂತಿ-ಸ್ಥಿರತೆಯಲ್ಲಿ ಕಣಿವೆ ರಾಜ್ಯ!
ಸಾಕಷ್ಟು ವಿರೋಧ ಹಾಗೂ ಭಾರೀ ಭದ್ರತೆಯ ನಡುವೆ ನಾಲ್ಕು ವರ್ಷದ ಹಿಂದೆ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಸಂವಿಧಾನದಲ್ಲಿ ನೀಡಲಾಗಿದ್ದ ವಿಶೇಷ ವಿಧಿಯನ್ನು ರದ್ದು ಮಾಡಿತು. ಆರ್ಟಿಕಲ್ 370 ಹಾಗೂ ಆರ್ಟಿಕಲ್ 35ಎ ರದ್ದು ಮಾಡಿ ಇಂದಿಗೆ ನಾಲ್ಕು ವರ್ಷ.
ನವದೆಹಲಿ (ಆ.4): ಭಾರಿ ಭದ್ರತೆ ಹಾಗೂ ಸಾಕಷ್ಟು ವಿರೋಧಗಳ ನಡುವೆ 2019ರ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ಆರ್ಟಿಕಲ್ 370 ಅಡಿಯಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ತೀರ್ಮಾನ ಮಾಡಿತ್ತು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾಡಿದ್ದ ಈ ನಿರ್ಧಾರಕ್ಕೀಗ ನಾಲ್ಕು ವರ್ಷ. ಈ ಅವಧಿಯಲ್ಲಿ ಕಣಿವೆ ರಾಜ್ಯದಲ್ಲಿ ಸಾಕಷ್ಟು ಸಾಧನೆಗಳಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಭಯೋತ್ಪಾದಕ ಚಟುವಟಿಕೆಗಳು, ಸೇನೆಯ ಮೇಲೆ ಕಲ್ಲು ತೂರಾಟ ಮಾಡುವ ಘಟನೆಗಳಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ.ಕಾಶ್ಮೀರದಲ್ಲಿ ಶಾಂತಿಯ ಮರುಸ್ಥಾಪನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಕೆಲಸಗಳು ವೇಗವಾಗಿ ಸಾಗುತ್ತದೆ. ಮೇ ತಿಂಗಳಲ್ಲಿ ಶ್ರೀನಗರದಲ್ಲಿ ಜಿ20ಯ ಟೂರಿಂಗ್ ವರ್ಕಿಂಗ್ ಗ್ರೂಪ್‌ನ ಸಭೆ ಕಾಶ್ಮೀರ ಬದಲಾಗುತ್ತಿದೆ ಎನ್ನುವ ಮಾತಿಗೆ ಉದಾಹರಣೆ ಎನ್ನುವಂತೆ ನಿಂತಿದೆ. ಅಂದಾಜು ಮೂರು ದಶಕಗಳ ನಂತರ ಕಾಶ್ಮೀರದಲ್ಲಿ ಸಾರ್ವಜನಿಕ ಹಾಗೂ ಸಾಮಾಜಿಕ ಜೀವನವವು ಅಡೆತಡೆಗಳಿಲ್ಲದೆ ಸಾಮಾನ್ಯ ದಿನಚರಿಗೆ ಮರಳಿದೆ.
2016ರ ಆಗಸ್ಟ್‌ನಿಂದ 2019ರ ಆಗಸ್ಟ್‌ವರೆಗೆ ಕಾಶ್ಮೀರದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರ ಗುಂಡಿಗೆ 124 ಸಾಮಾನ್ಯ ಜನರು ಬಲಿಯಾಗಿದ್ದಾರೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಇಂಥ ಒಂದೇ ಒಂದು ಸಾವುಗಳು ವರದಿಯಾಗಿಲ್ಲ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಇನ್ನು 370ನೇ ವಿಧಿ ರದ್ದತಿಯಿಂದ ಭಯೋತ್ಪಾದನಾ ಚಟುವಟಿಕೆಗಳು ಹಾಗೂ ಸ್ವಜನಪಕ್ಷಪಾತದಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2023 ರಲ್ಲಿ ಸ್ಥಳೀಯರ ಉಗ್ರಗಾಮಿಗಳ ನೇಮಕಾತಿ ಮತ್ತು ಭಯೋತ್ಪಾದಕರ ಹತ್ಯೆಗಳೆರಡೂ ಗಣನೀಯವಾಗಿ ಕಡಿಮೆಯಾಗಿದೆ.
ಈ ವರ್ಷದ ಜನವರಿ 1 ರಿಂದ ಆಗಸ್ಟ್ 5 ರವರೆಗೆ ಭದ್ರತಾ ಪಡೆಗಳು ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ ಹತರಾದ ಉಗ್ರರ ಸಂಖ್ಯೆ 35. ಕಳೆದ ವರ್ಷ ಇದೇ ಅವಧಿಯಲ್ಲಿ 120 ಕ್ಕೂ ಹೆಚ್ಚು ಉಗ್ರರರನ್ನು ಹತ್ಯೆ ಮಾಡಲಾಗಿತ್ತು. 2022ರಲ್ಲಿ 56 ಪಾಕ್ ಮೂಲಕ ಭಯೋತ್ಪಾದಕರು ಸೇರಿದಂತೆ 186 ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವರ್ಷ ಹಲವಾರು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಮತ್ತು ಜುಲೈ ಅಂತ್ಯದವರೆಗೆ ಉಗ್ರಗಾಮಿಗಳಿಗೆ ಸೇರುವ ಸ್ಥಳೀಯರ ಸಂಖ್ಯೆ 12ಕ್ಕೆ ಇಳಿಸಿದೆ. ಇದರ ಪರಿಣಾಮವಾಗಿ ಸಕ್ರಿಯ ಉಗ್ರಗಾಮಿಗಳ ಸಂಖ್ಯೆ ಎರಡಂಕಿಗೆ ಇಳಿಕೆಯಾಗಿದೆ.
ಆಗಸ್ಟ್ 3 ರಂದು ಶೋಪಿಯಾನ್‌ನ ಸರ್ಕಾರಿ ಪದವಿ ಕಾಲೇಜಿನಲ್ಲಿ (ಜಿಡಿಸಿ) ನಡೆದ ಭವ್ಯವಾದ ಕಾರ್ಯಕ್ರಮ ಕಾಶ್ಮೀರ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತಿದೆ. ನೂರಾರು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದರು, ಶಾಂತಿ, ರಾಷ್ಟ್ರ ನಿರ್ಮಾಣ ಮತ್ತು ಸಕಾರಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಹಿಂದೆ ಭಾರತ ವಿರೋಧಿ ಚಟುವಟಿಕೆಗಳಿಗೆ ಹೆಸರಾದ ಈ ಜಿಲ್ಲೆಯ ಈ ಘಟನೆಯು ಸಕಾರಾತ್ಮಕ ಚಟುವಟಿಕೆಗಳ ಕಡೆಗೆ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ.
ಆರ್ಟಿಕಲ್ 370 ರದ್ದತಿಯ ನಂತರ ಕಾಶ್ಮೀರದಲ್ಲಿ ಗಮನಾರ್ಹ ಸಾಧನೆಯೆಂದರೆ ಆಡಳಿತಾತ್ಮಕ ನಿಯಂತ್ರಣವನ್ನು ಮರುಸ್ಥಾಪನೆ ಮಾಡಿರುವುದು. ಈ ಸುರಕ್ಷಿತ ವಾತಾವರಣವು ಸುಮಾರು 25 ಸಾವಿರ ಕೋಟಿ ಮೌಲ್ಯದ ಹೂಡಿಕೆಯನ್ನು ಉತ್ತೇಜಿಸಿದೆ, ಇನ್ನು ಕೇಂದ್ರಾಡಳಿತ ಪ್ರದೇಶದಲ್ಲಿ 80 ಸಾವಿರ ಕೋಟಿ ರೂಪಾಯಿ ಶಿಫಾರಸುಗಳು ಪ್ರಗತಿಯಲ್ಲಿದೆ. ಆರ್ಟಿಕಲ್ 370 ರದ್ದಾಗುವ ಮುನ್ನ ಜಮ್ಮು ಕಾಶ್ಮೀರ ಕೇವಲ 14 ಸಾವಿರ ಕೋಟಿ ಹೂಡಿಕೆಯನ್ನು ಪಡೆಯುತ್ತಿತ್ತು. ಹೊಸ ಕೈಗಾರಿಕಾ ಅಭಿವೃದ್ಧಿ ಯೋಜನೆ ಜಾರಿ ಮಾಡಿದ ಬಳಿಕ ಈ ರಾಜದಲ್ಲು 81,122 ಕೋಟಿ ಹೂಡಿಕೆಗೆ ಶಿಫಾರಸುಗಳು ಕಳೆದ ಎರಡು ವರ್ಷದಲ್ಲಿಯೇ ಬಂದಿವೆ. ಅದರೊಂದಿಗೆ ಜಮ್ಮು ಮತ್ತು ಕಾಶ್ಮೀರ ಎರಡೂ ವಿಭಾಗಗಳಲ್ಲಿ ಪ್ರಮುಖ ಘಟಕಗಳನ್ನು ಸ್ಥಾಪಿಸಲು ಗಣನೀಯ ಪ್ರಮಾಣದ ಭೂ ಹಂಚಿಕೆಗಳನ್ನು ಮಾಡಲಾಗಿದೆ.
'ಈ ಸ್ವಾತಂತ್ರ್ಯ ಮೊದಲು ಇತ್ತೇ..' ಹಿಜಾಬ್ ಧರಿಸಿ ಬುಲೆಟ್ ಓಡಿಸುವ ವಿಡಿಯೋ ಹಾಕಿ ಪ್ರಶ್ನಿಸಿದ ಕಾಶ್ಮೀರಿ ಯುವತಿ!
ಇನ್ನು ಪ್ರವಾಸೋದ್ಯಮ ನಿಟ್ಟಿನಲ್ಲೂ ಜಮ್ಮು ಕಾಶ್ಮೀರದಲ್ಲಿ ದೊಡ್ಡ ಮಟ್ಟದ ಪ್ರಗತಿಯಾಗಿದೆ. ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ. ಕಳೆದ ಎರಡು ವರ್ಷದಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ 1.88 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವರ್ಷ ಅದು 2 ಕೋಟಿಗೆ ಏರಿಕೆಯಾಗುವ ಸಾಧ್ಯತೆ. ಒಒಂದು ಕಾಲದಲ್ಲಿ ಹನಿಮೂನ್‌ಗಳ ತಾಣವಾಗಿದ್ದ ಕಾಶ್ಮೀರ, ಇಂದು ವಿವಾಹಿತ ದಂಪತಿಗಳ ದೀರ್ಘ ವಾರ್ಷಿಕೋತ್ಸವ ಕಾರ್ಯಕ್ರಮಗಳಿಗೂ ವೇದಿಕೆಯಾಗಿದೆ.
ಆರ್ಟಿಕಲ್ 370 ರದ್ದು ವಿರೋಧಿಸಿ ಆ.5ರಂದು ಜಾಗೃತವಾಗಲಿದೆ ಪಾಕಿಸ್ತಾನದ ಟೂಲ್‌ಕಿಟ್ ಗ್ಯಾಂಗ್!
ಇನ್ನು ಪ್ರತ್ಯೇಕತಾವಾದಿಗಳು ಹಾಗೂ ಉಗ್ರರ ಮಾತಿಗೆ ಅಲ್ಲಿ ಈಗ ಕಿಮ್ಮತ್ತಿಲ್ಲ. ಬಂದ್ ಮಾಡಿ ಎಂದರೆ ಅದನ್ನು ಯಾರೂ ಕೇಳುತ್ತಿಲ್ಲ. ಶಾಂತಿ ಸ್ಥಾಪನೆಯ ಆಗಿರುವ ಲಾಭವನ್ನು ಅವರು ಪಡೆದುಕೊಳ್ಳಯತ್ತಿದ್ದಾರೆ. 370ನೇ ವಿಧಿ ರದ್ದಾಗುವ ಮುನ್ನ, ಪ್ರತಿ ದಿನ ಬಂದ್‌ಗಳು, ಕಲ್ಲು ತೂರಾಟ, ಹಿಂಸಾಚಾರದಿಂದಲೇ ಕಾಶ್ಮೀರ ಸುದ್ದಿಯಾಗುತ್ತಿತ್ತು. ಇದು ಈ ಪ್ರದೇಶದ ಶಿಕ್ಷಣ ಹಾಗೂ ಬ್ಯುಸಿನೆಸ್ ಮೇಲೆ ಭಾರೀ ಪರಿಣಾಮ ಬೀರಿತ್ತು. ಇನ್ನು ಈ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾಗಿದ್ದ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, 370ನೇ ವಿಧಿಯಿಂದ ತಮಗಾಗುವ ಲಾಭ ಲೆಕ್ಕಾಚಾರದಲ್ಲಿಯೇ ಇನ್ನೂ ಇದ್ದಾರೆ.
ಒಟ್ಟಾರೆಯಾಗಿ, ಆರ್ಟಿಕಲ್ 370 ರ ರದ್ದತಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಪ್ರಗತಿಯ ಹೊಸ ಯುಗಕ್ಕೆ ನಾಂದಿ ಹಾಡಿದೆ, ಪ್ರದೇಶವನ್ನು ಉತ್ತಮವಾಗಿ ಪರಿವರ್ತಿಸಿದೆ.