ಮದನಿ ಡೇಂಜರಸ್ ವ್ಯಕ್ತಿ: ಸುಪ್ರೀಂ ಕೋರ್ಟ್ ಕಿಡಿ!
ಮದನಿ ಡೇಂಜರಸ್ ವ್ಯಕ್ತಿ: ಸುಪ್ರೀಂ| ಬೆಂಗಳೂರು ಸ್ಫೋಟ ಆರೋಪಿ ಬಗ್ಗೆ ಅಭಿಪ್ರಾಯ| ಕೇರಳಕ್ಕೆ ಹೋಗಲು ಅನುಮತಿ ಕೇಳಿರುವ ಮದನಿ
ನವದೆಹಲಿ(ಏ.06): ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ಕೇರಳದ ಪಿಡಿಪಿ ಪಕ್ಷದ ಮುಖಂಡ ಅಬ್ದುಲ್ ಮದನಿಯನ್ನು ಸುಪ್ರೀಂ ಕೋರ್ಟ್ ‘ಅಪಾಯಕಾರಿ ವ್ಯಕ್ತಿ’ ಎಂದು ಕರೆದ ಪ್ರಸಂಗ ಸೋಮವಾರ ನಡೆಯಿತು.
ಪ್ರಕರಣದ ವಿಚಾರಣೆ ಮುಗಿಯುವವರೆಗೆ ಕೇರಳಕ್ಕೆ ತೆರಳುವ ಸಲುವಾಗಿ ಜಾಮೀನು ಷರತ್ತಿನಲ್ಲಿ ವಿನಾಯ್ತಿ ಕೋರಿ ಮದನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರಿದ್ದ ಪೀಠವು ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು.
2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜುಲೈ 2014ರಲ್ಲಿ ಮದನಿಗೆ ಜಾಮೀನು ನೀಡಲಾಗಿತ್ತು. ಆಗ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳದಂತೆ ಷರತ್ತು ಹಾಕಲಾಗಿತ್ತು. ಇದೀಗ ಅನಾರೋಗ್ಯ ಹಾಗೂ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಕಾರಣ ಹೇಳಿ ಕೇರಳಕ್ಕೆ ತೆರಳಲು ಅವಕಾಶ ನೀಡುವಂತೆ ಕೋರಿ ಮದನಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಈ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು ಮದನಿಗೆ ಈ ಹಿಂದೆ ಜಾಮೀನು ನೀಡಿದ್ದ ಪೀಠದಲ್ಲಿ ನಾನೂ ಇದ್ದೆನಲ್ವಾ? ಎಂದು ಪ್ರಶ್ನಿಸಿದರು. ಅಲ್ಲದೆ, ‘ಈತ ಅಪಾಯಕಾರಿ ವ್ಯಕ್ತಿ ಗೊತ್ತಲ್ವಾ ಎಂದು’ ಮೌಖಿಕವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರ ನೇತೃತ್ವದ ತ್ರಿಸದಸ್ಯ ಪೀಠದ ಭಾಗವಾಗಿರುವ ನ್ಯಾಯಮೂರ್ತಿ ರಾಮಸುಬ್ರಮಣಿ ಅವರು, ತಾವು ಈ ಹಿಂದೆ ಮದನಿ ಪರ ವಕಾಲತ್ತು ನಡೆಸಿರಬಹುದು ಎಂದು ಹೇಳಿದರು. ಆಗ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು ಈ ಸಂಬಂಧ ಪರಿಶೀಲಿಸುವಂತೆ ಮದನಿ ಪರ ವಕೀಲ ಜಯಂತ್ ಭೂಷನ್ ಅವರಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದರು.