ಒಡಿಶಾದ ಬಹನಗಾದಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತ ಇನ್ನೂ ಜನರ ಮನಸ್ಸಿನಲ್ಲಿ ಇರುವಾಗಲೇ, ಬಿಹಾರದಲ್ಲಿ ಸೋಮವಾರ ಪವನ್‌ ಎಕ್ಸ್‌ಪ್ರೆಸ್‌ ರೈಲು ಮುರಿದ ಗಾಲಿಯಲ್ಲಿ 10 ಕಿಲೋಮೀಟರ್‌ ದೂರ ಪ್ರಯಾಣ ಮಾಡಿದ ಘಟನೆ ನಡೆದಿದೆ. 

ನವದೆಹಲಿ (ಜು.3): ರೈಲಿನ ಗಾಲಿ ಮುರಿದಿದ್ದರೂ , ಅಂದಾಜು 10 ಕಿಲೋಮೀಟರ್‌ ದೂರ ರೈಲು ಪ್ರಯಾಣ ಮಾಡಿದ ಘಟನೆ ಬಿಹಾರದ ಮುಝಾಫರ್‌ ಜಿಲ್ಲೆಯಲ್ಲಿ ನಡೆದಿದೆ. ಮುಂಬೈಗೆ ತೆರಳುತ್ತಿದ್ದ ಪವನ್‌ ಎಕ್ಸ್‌ಪ್ರೆಸ್‌ ರೈಲಿನ ಗಾಲಿ ಮುರಿದರೂ, ಅಂದಾಜು 10 ಕಿಲೋಮೀಟರ್‌ ಪ್ರಯಾಣ ನಡೆಸಿದೆ. ಆದರೆ, ಪ್ರಯಾಣಿಕನೊಬ್ಬನ ಜಾಣ್ಮೆಯಿಂದ ರೈಲಿನ ದೊಡ್ಡ ದುರಂತ ತಪ್ಪಿದೆ ಎನ್ನಲಾಗಿದೆ. ಭಾನುವಾರ ತಡರಾತ್ರಿ ಭಗವಾನ್‌ಪುರ ರೈಲ್ವೇ ನಿಲ್ದಾಣದ ಮುಜಾಫರ್‌ಪುರ-ಹಾಜಿಪುರ ರೈಲು ವಿಭಾಗದಲ್ಲಿ ಈ ಘಟನೆ ವರದಿಯಾಗಿದೆ. ಮುಜಾಫರ್‌ಪುರ ರೈಲು ನಿಲ್ದಾಣದಿಂದ ರೈಲು ಹೊರಡುತ್ತಿದ್ದಂತೆಯೇ ಎಸ್‌-11 ಕೋಚ್‌ನಲ್ಲಿದ್ದ ಪ್ರಯಾಣಿಕರಿಗೆ ದೊಡ್ಡ ಶಬ್ದ ಕೇಳಿತ್ತು ಎಂದು ಎಎನ್‌ಐ ವರದಿ ಮಾಡಿದೆ. ಆದರೆ, ವೇಗವಾಗಿ ಚಲಿಸುತ್ತಿದ್ದ ರೈಲು ಭಗವಾನ್‌ಪುರ ರೈಲು ನಿಲ್ದಾಣವನ್ನು ತಲುಪಿದರೂ ಸಮಸ್ಯೆಯನ್ನು ಗುರುತಿಸಲು ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ವರದಿಯಾಗಿದೆ. ರೈಲು ಭಗವಾನ್‌ಪುರ ರೈಲು ನಿಲ್ದಾಣದಿಂದ ಹೊರಟಾಗ ಪ್ರಯಾಣಿಕರಲಲ್ಲಿ ಒಬ್ಬರು ಚೈನ್ ಎಳೆದು ನಿಲ್ಲಿಸಿದರು ಎಂದು ಪ್ರಯಾಣಿಕ ರಾಜುಕುಮಾರ್ ಹೇಳಿದರು.

ಈ ವೇಳೆ ಸಮಸ್ಯೆ ಆಲಿಸಲು ಬಂದ ರೈಲಿನ ಚಾಲಕ, ಸಿಬ್ಬಂದಿ ಮತ್ತು ರೈಲ್ವೇ ನೌಕರರಿಗೆ ತಾವು ಕೇಳಿದ್ದ ದೊಡ್ಡ ಶಬ್ದದ ಮಾಹಿತಿ ನೀಡಿದ್ದರು. ತಪಾಸಣೆಯ ವೇಳೆ ಎಸ್-11 ಬೋಗಿಯ ಗಾಲಿ ಮುರಿದಿರುವುದು ಕಂಡುಬಂದಿದೆ. ರೈಲ್ವೆ ಇಂಜಿನಿಯರ್‌ಗಳು ಹಾಗೂ ನೌಕರರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ದುರಸ್ತಿಪಡಿಸಿದ್ದು, ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ರೈಲು ಗಾಲಿ ಮುರಿದ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಯನ್ನು ರೈಲ್ವೇಸ್‌ ಶ್ಲಾಘಿಸಿದೆ.

"ಪವನ್ ಎಕ್ಸ್‌ಪ್ರೆಸ್‌ನ ಗಾಲಿ ಮುರಿದಿದೆ ಎಂದು ನಮಗೆ ಮಾಹಿತಿ ಬಂದಿತ್ತು. ನಮ್ಮ ತಂಡವು ಅಲ್ಲಿಗೆ ತಲುಪಿ ದೋಷವನ್ನು ಸರಿಪಡಿಸಿದೆ" ಎಂದು ಪೂರ್ವ ಮಧ್ಯ ರೈಲ್ವೆ ಹಾಜಿಪುರದ ಸಿಪಿಆರ್‌ಒ ವೀರೇಂದ್ರ ಕುಮಾರ್ ಹೇಳಿದರು. ಜೂನ್ 2 ರಂದು 290 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡ ಬಾಲಸೋರ್ ರೈಲು ಅಪಘಾತದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ. ಅಂದು ಎರಡು ಪ್ಯಾಸೆಂಜರ್ ರೈಲುಗಳು ಸೇರಿದಂತೆ ಮೂರು ರೈಲುಗಳನ್ನು ಒಳಗೊಂಡಿರುವ ಈ ದುರ್ಘಟನೆಯು ಕಳೆದ ಎರಡು ದಶಕಗಳಲ್ಲೇ ಅತ್ಯಂತ ಭೀಕರ ರೈಲು ಅಪಘಾತ ಎಂದು ಪರಿಗಣಿಸಲಾಗಿದೆ.

ಪವನ್ ಎಕ್ಸ್‌ಪ್ರೆಸ್ ಅನ್ನು ಜಯನಗರದಿಂದ ತೆರೆಯುವ ಮೊದಲು ಅದನ್ನು ಪರಿಶೀಲಿಸಿರಬೇಕು ಎಂದು ಸಮಸ್ತಿಪುರ ವಾಷಿಂಗ್ ಪ್ಲಾಂಟ್‌ನ ಕಾರ್ಮಿಕರು ತಿಳಿಸಿದ್ದಾರೆ. ತನಿಖೆ ಮುಗಿದ ನಂತರವೇ ಕೋಚ್‌ಗಳು ಫಿಟ್‌ ಎಂದು ಅಲ್ಲಿನ ಸಿಬ್ಬಂದಿ ಘೋಷಣೆ ಮಾಡುತ್ತಾರೆ. ಇದಾದ ಬಳಿಕವಷ್ಟೇ ರೈಲು ಸಂಚಾರ ಆರಂಭವಾಗುತ್ತಿತ್ತು. ಜಯನಗರದಿಂದ ರೈಲು ಆರಂಭವಾದ ಬಳಿಕವೇ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇದೆ. ಪರೀಕ್ಷೆಯಿಲ್ಲದೆ ಫಿಟ್ ಸರ್ಟಿಫಿಕೇಟ್ ನೀಡಿದರೆ ಅದು ದೊಡ್ಡ ತಪ್ಪು ಎಂದು ಪರಿಗಣಿಸಲಾಗುವುದು. ಇಂತಹ ತಪ್ಪಿಗೆ ರೈಲ್ವೆ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದಿದ್ದಾರೆ.

ರೈಲು ನಿಲ್ದಾಣದಲ್ಲಿ ಮಲಗಿದ ಪ್ರಯಾಣಿಕರಿಗೆ ನೀರೆರಚಿದ ಪೊಲೀಸ್: Video Viral ವ್ಯಾಪಕ ಆಕ್ರೋಶ

ರೈಲ್ವೆ ಮೂಲಗಳ ಪ್ರಕಾರ, ಬೋಗಿಯ ಚಕ್ರದಲ್ಲಿ ಬಕ್ಲಿಂಗ್ ಸಮಸ್ಯೆಯಾದರೆ, ನಂತರ ಆ ಚಕ್ರವನ್ನು ಕಾರ್ಖಾನೆಗೆ ತೆಗೆದುಕೊಂಡು ಹೋಗಿ ಸವೆತ ಭಾಗವನ್ನು ಕತ್ತರಿಸಲಾಗುತ್ತದೆ. ನಿಗದಿತವಾಗಿ ಇದನ್ನು ಮಾಡುತ್ತಿರುತ್ತಾರೆ. ಅದಾಗದೇ ಇದಲ್ಲಿ ಗಾಲಿ ಮುರಿಯುವ ಸಂಭವ ಇರುತ್ತದೆ. ವಾಷಿಂಗ್‌ ಪ್ಲ್ಯಾಂಟ್‌ಗಳಲ್ಲಿ ಮಾತ್ರವೇ ಇದರ ಸಮಸ್ಯೆ ಬಗ್ಗೆ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಒಡಿಶಾ ರೈಲು ದುರಂತಕ್ಕೆ ಸಿಬ್ಬಂದಿ ಕಾರಣ: ರೈಲ್ವೆ ತನಿಖಾ ವರದಿ; ವಿಧ್ವಂಸಕ ಕೃತ್ಯದ ಅನುಮಾನದ ಬಗ್ಗೆ ಸಿಬಿಐ ತನಿಖೆ ಮುಂದುವರಿಕೆ