ವಿಮಾನದಲ್ಲಿ ಅಸಾಮಾನ್ಯ ವಿಷಯಗಳನ್ನು ಗಮನಿಸಿದ್ದಾಗಿ ಮತ್ತು ವಿಡಿಯೋ ಮಾಡಿರುವುದಾಗಿಯೂ ತಿಳಿಸಿದ್ದಾರೆ. ಪ್ರಯಾಣದ ವೇಳೆ ಗಮನಿಸಿದ ವಿಷಯಗಳನ್ನು ಏರ್ ಇಂಡಿಯಾಗೆ ಟ್ವೀಟ್ ಮಾಡಿದ್ದಾರೆ.

ನವದೆಹಲಿ: ಗುರುವಾರ ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿ ಕೆಲವು ಗಂಟೆಗಳ ಮೊದಲು ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರ ಪೋಸ್ಟ್ ವೈರಲ್ ಆಗಿದೆ. ದೆಹಲಿಯಿಂದ ಅಹಮದಾಬಾದ್‌ಗೆ ಪ್ರಯಾಣಿಸಿದ್ದ ಆಕಾಶ್ ವತ್ಸ ಎಂಬವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ವಿಮಾನದ ಸ್ಥಿತಿಯ ಬಗ್ಗೆ ಕೆಲವು ಗಮನಾರ್ಹ ಅಂಶಗಳನ್ನು ಆಕಾಶ್ ವತ್ಸ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆಕಾಶ್ ವತ್ಸ ಎಕ್ಸ್ ಖಾತೆಯಲ್ಲಿ ವಿಡಿಯೊಗಳೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅಧಿಕಾರಿಗಳು ಸಂಪರ್ಕಿಸಬೇಕೆಂದು ಕೋರಿದ್ದಾರೆ. ವಿಮಾನದಲ್ಲಿ ಅಸಾಮಾನ್ಯ ವಿಷಯಗಳನ್ನು ಗಮನಿಸಿದ್ದಾಗಿ ಮತ್ತು ವಿಡಿಯೋ ಮಾಡಿರುವುದಾಗಿಯೂ ತಿಳಿಸಿದ್ದಾರೆ. ಅಹಮದಾಬಾದ್‌ನಿಂದ ಹೊರಡುವ ಎರಡು ಗಂಟೆಗಳ ಮೊದಲು ನಾನು ಅದೇ ವಿಮಾನದಲ್ಲಿದ್ದೆ. ಈ ವಿಮಾನದಲ್ಲಿ ನಾನು ದೆಹಲಿಯಿಂದ ಅಹಮದಾಬಾದ್‌ಗೆ ಬಂದೆ. ವಿಮಾನದಲ್ಲಿ ಏನೋ ಅಸಾಮಾನ್ಯವಾದುದನ್ನು ನಾನು ಗಮನಿಸಿದೆ ಎಂದು ಹೇಳಿದ್ದಾರೆ.

ಪ್ರಯಾಣದ ವೇಳೆ ನಾನು ಗಮನಿಸಿದ ವಿಷಯಗಳನ್ನು @airindia ಗೆ ಟ್ವೀಟ್ ಮಾಡಲುವೀಡಿಯೊವನ್ನು ಸಹ ತೆಗೆದುಕೊಂಡೆ. ಹೆಚ್ಚಿನ ವಿವರಗಳನ್ನು ನೀಡಲು ನಾನು ಬಯಸುತ್ತೇನೆ. ದಯವಿಟ್ಟು ನನ್ನನ್ನು ಸಂಪರ್ಕಿಸಿ ಎಂದು ಆಕಾಶ್ ಹೇಳುತ್ತಾರೆ.

ಎಸಿಗಳು ಸರಿಯಾಗಿ ಕೆಲಸ ಮಾಡ್ತಿರಲಿಲ್ಲ

ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಆಕಾಶ್ ವತ್ಸ್, ವಿಮಾನದ ಫ್ಲಾಪ್‌ಗಳು ಮೇಲೆ ಮತ್ತು ಕೆಳಗೆ ಆಗಾಗ ಚಲಿಸುತ್ತಿದ್ದವು. ವಿಮಾನ ತಜ್ಞರಲ್ಲದ ತಮಗೆ ಇದರ ಬಗ್ಗೆ ಹೆಚ್ಚು ತಿಳಿದಿಲ್ಲ. ವಿಮಾನ ಟೇಕ್ ಆಫ್ ಆಗುವ ಮುನ್ನ ACಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಆಕಾಶ್ ಅವರ ಹೇಳಿಕೆಗಳಿಗೂ ಪತನಕ್ಕೂ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಪಘಾತದ ಕಾರಣ ಇನ್ನೂ ತನಿಖೆಯ ಹಂತದಲ್ಲಿದೆ.

ಮೃತರನ್ನು ಗುರುತಿಸಲು DNA ಪರೀಕ್ಷೆ ನಡೆಯುತ್ತಿದ್ದು, 200ಕ್ಕೂ ಹೆಚ್ಚು ಜನರು ಮಾದರಿಗಳನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದರು. ಈ ವಿಮಾನಪತನದಲ್ಲಿ ಬದುಕುಳಿದ ರಮೇಶ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು.

Scroll to load tweet…

ವಿಮಾನದಲ್ಲಿದ್ದ ಲಂಡನ್ ಪ್ರಜೆಗಳಿಂದ ವಿಡಿಯೋ ವೈರಲ್

ಗುರುವಾರ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಿಲುಕಿದ ಲಂಡನ್‌ನ ಪ್ರಜೆಗಳಿಬ್ಬರು ಭಾರತ ಬಿಟ್ಟು ಹೊರಡುವ ಮುಂಚೆ ಮಾಡಿದ ವಿಡಿಯೋ ಸಹ ವೈರಲ್ ಆಗಿದೆ. ಲಂಡನ್ ಮೂಲದ ಯೋಗಾಭ್ಯಾಸಿ ಜೇಮಿ ಮೀಕ್ ಮತ್ತು ಅವರ ಸ್ನೇಹಿತ ಫಿಯೊಂಗಲ್ ಗ್ರೀನ್‌ಲಾ ಗುಜರಾತ್ ಭೇಟಿ ಮುಗಿಸಿ ಲಂಡನ್‌ಗೆ ತೆರಳುವ ಮುಂಚೆ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ‘ಇದು ಭಾರತದಲ್ಲಿ ನಮ್ಮ ಕೊನೆಯ ರಾತ್ರಿ. ಭಾರತದಲ್ಲಿ ನಮಗೆ ನಿಜವಾಗಿಯೂ ಮಾಂತ್ರಿಕ ಅನುಭವವಾಯಿತು. ಮನಸ್ಸಿಗೆ ಮುದ ನೀಡುವ ಅನೇಕ ಕ್ಷಣಗಳು ಘಟಿಸಿದವು. ಇವನ್ನೆಲ್ಲ ವ್ಲಾಗ್‌ನಲ್ಲಿ ಹಂಚಿಕೊಳ್ಳುತ್ತೇವೆ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಪೈಲಟ್ ಕ್ಲೈವ್‌ ಕುಂದರ್‌‌

ಮಂಗಳೂರು ಮೂಲದ ಪೈಲಟ್ ಕ್ಲೈವ್‌ ಕುಂದರ್‌‌ ಮೃತಪಟ್ಟಿದ್ದಾರೆ. ಪತನಗೊಂಡ ಏರ್‌ ಇಂಡಿಯಾ ವಿಮಾನದ ಕೋ ಪೈಲಟ್ ಆಗಿದ್ದ ಕ್ಲೈವ್‌ ಕುಂದರ್‌, ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಯಾಪ್ಟನ್ ಕ್ಲೈವ್‌ ಕುಂದರ್‌ ಮಂಗಳೂರು ಮೂಲದವರಾದರೂ, ಅವರ ಕುಟುಂಬ ಈಗ ಮುಂಬೈನಲ್ಲಿ ನೆಲೆಸಿದೆ. ಇವರ ತಾಯಿ ರೇಖಾ ಕುಂದರ್‌, ಏರ್‌ಹೋಸ್ಟ್‌ ಆಗಿ ನಿವೃತ್ತಿ ಹೊಂದಿದ್ದರು. ಕ್ಯಾ.ಕ್ಲೈವ್‌ ಕುಂದರ್‌ ಅವರು ಪ್ಯಾರಿಸ್ ಏರ್ ಇಂಕ್‌ನಲ್ಲಿ ತರಬೇತಿ ಪಡೆದಿದ್ದು, 1,100 ಗಂಟೆಗಳ ಹಾರಾಟ ಅನುಭವ ಹೊಂದಿದ ಸಹ ಪೈಲಟ್‌ ಆಗಿದ್ದಾರೆ.

Scroll to load tweet…