ಪಾಡ್ನಾ(ಜು.16): ಬಿಹಾರದ ಗೋಪಾಲ್‌ಗಂಜ್‌ನಲ್ಲಿ 264 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲಾದ ಸತ್ತಾರ್‌ಘಾಟ್‌ ಸೇತುವೆ ಬುಧವಾರದಂದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಅಲ್ಲದೇ ಸೇತುವೆ ಧ್ವಂಸಗೊಂಡ ಪರಿಣಾಮ ಇಲ್ಲಿನ ಚಂಪಾರಣ್ ತಿರುಹುತ್ ಹಾಗೂ ಸಾರಣ್‌ನ ಹಲವಾರು ಜಿಲ್ಲೆಗಳ ನಡುವಿನ ಸಂಪರ್ಕವೂ ಕಡಿತಗೊಂಡಿದೆ. ಈ ಸೇತುವೆಯಲ್ಲಿ ಸಂಚಾರಿಸುವುದು ಅಸಾಧ್ಯವಾಗಿದೆ. ಹೀಗಿರುವಾಗ ಇಲ್ಲಿನ ವಿಪಕ್ಷ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಸಿಎಂ ನಿತೀಶ್ ಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ತೇಜಸ್ವಿ ಯಾದವ್ 'ಎಂಟು ವರ್ಷದಲ್ಲಿ 263.47 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲಾದ ಗೋಪಾಲ್‌ಗಂಜ್‌ನ ಅತ್ತರ್‌ ಘಾಟ್ ಸೇತುವೆಯನ್ನು ಜೂನ್ 16ರಂದು ಖುದ್ದು ನಿತೀಶ್ ಕುಮಾರ್ ಉದ್ಘಾಟನೆ ಮಾಡಿದ್ದರು. ಆದರೆ ಇಂದ 29 ದಿನಗಳ ಬಳಿಕ ಈ ಸೇತುವೆ ಕೊಚ್ಚಿ ಹೋಗಿ ಧ್ವಂಸವಾಗಿದೆ. ಯಾರಾದ್ರೂ ಇದನ್ನು ನಿತೀಶ್ ಕುಮಾರ್ ಮಾಡಿದ ಭ್ರಷ್ಟಾಚಾರ ಎಂದರೆ ಹುಷಾರ್! 263 ಕೋಟಿ ಇವರಿಗೆ ಲೆಕ್ಕವಲ್ಲ ಇದೆಲ್ಲಾ ಇವರಿಗೆ ಜುಜುಬಿ' ಎಂದು ಬರೆದಿದ್ದಾರೆ.

ಇನ್ನು ಜೂನ್ 16ರಂದು ಬಿಹಾರ ಸಿಎಂ ನಿತೀಶ್ ಕುಮಾರ್ ಪಾಟ್ನಾದಲ್ಲಿ ವಿಡಿಯೋ ಕಾನ್ಫರೆನ್ಸ್‌ ಒಂದರ ಮೂಲಕ ಈ ಸೇತುವೆಯನ್ನು ಉದ್ಘಾಟಿಸಿದ್ದರು. ಚಂಪಾರಣ್ ತಿರುಹುತ್ ಹಾಗೂ ಸಾರಣ್‌ನ ಹಲವಾರು ಜಿಲ್ಲೆಗಳ ನಡುವೆ ಇದು ಸಂಪರ್ಕ ಕಲ್ಪಿಸುತ್ತಿದ್ದ ಇದು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿತ್ತು. 

ಗೋಪಾಲ್‌ಗಂಜ್‌ನಲ್ಲಿ ಇದು ಮೂರು ಲಕ್ಷ ಕ್ಯೂಸೆಕ್‌ಗಿಂತಲೂ ಹೆಚ್ಚು ನೀರು ಹರಿಯುತ್ತಿತ್ತು. ಈ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ ಎನ್ನಲಾಗಿದೆ