ಭೋಪಾಲ್‌[ಮಾ.08]: ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿಂದಿನ ಶಕ್ತಿ ಎಂದು ಕಾಂಗ್ರೆಸ್‌ನಿಂದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಶಾಸಕ ಸಂಜಯ್‌ ಪಾಠಕ್‌ಗೆ ಸೇರಿದ ರೆಸಾರ್ಟ್‌ ಅನ್ನು ಶನಿವಾರ ಧ್ವಂಸಗೊಳಿಸಲಾಗಿದೆ.

ರೆಸಾರ್ಟ್‌ ತೆರವು ಮಾಡಿದ ಜಿಲ್ಲಾಡಳಿತದ ಕ್ರಮವು ರಾಜಕೀಯ ಪ್ರೇರಿತ ಎಂದು ಬಿಜೆಪಿ ಶಾಸಕ ಸಂಜಯ್‌ ಪಠಾಕ್‌ ದೂರಿದ್ದಾರೆ. ಆದರೆ, ಅಕ್ರಮವಾಗಿ ನಿರ್ಮಿಸಲಾಗಿದ್ದ ಸೈನಾ ರೆಸಾರ್ಟ್‌ ಅನ್ನು ಒಂದು ವಾರದ ಒಳಗಾಗಿ ತೆರವುಗೊಳಿಸಬೇಕು. ಅಲ್ಲದೆ, ರೆಸಾರ್ಟ್‌ ಮೇಲೆ 50 ಸಾವಿರ ರು. ದಂಡ ವಿಧಿಸಿ ಫೆ.12ರಂದು ಆದೇಶಿಸಲಾಗಿತ್ತು. ಈ ಸಂಬಂಧ ರೆಸಾರ್ಟ್‌ಗೆ ನೋಟಿಸ್‌ ರವಾನೆ ಮಾಡಲಾಗಿತ್ತು.

ಈ ಎಲ್ಲ ಪ್ರಕ್ರಿಯೆ ಮುಕ್ತಾಯವಾದ ಬಳಿಕವಷ್ಟೇ ಶನಿವಾರ ಬೆಳಗ್ಗೆ ರೆಸಾರ್ಟ್‌ ಅನ್ನು ತೆರವು ಮಾಡಲಾಗಿದೆ. ಅಲ್ಲದೆ, ಈ ಭಾಗದಲ್ಲಿದ್ದ ಇನ್ನಿತರ 10 ರೆಸಾರ್ಟ್‌ಗಳ ವಿರುದ್ಧವೂ ಇದೇ ಕ್ರಮ ಕೈಗೊಳ್ಳಲಾಗಿದೆ ಎಂದು ಉಮಾರಿಯಾ ಜಿಲ್ಲಾಡಳಿತ ತಿಳಿಸಿದೆ.

ಇತ್ತೀಚೆಗಷ್ಟೇ, ಪಾಠಕ್‌ ಒಡೆತನದ ಕಬ್ಬಿಣದ ಗಣಿಗಾರಿಕೆ ಕಂಪನಿ ಬಂದ್‌ ಮಾಡುವಂತೆ ಕಮಲ್‌ನಾಥ್‌ ಸರ್ಕಾರ ಆದೇಶ ಹೊರಡಿಸಿತ್ತು.