ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಮಂಗಳವಾರ ಲೋಕಸಭೆಯಲ್ಲಿ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಭರ್ಜರಿ ವಾಕ್ಸಮರ ನಡೆಸಿದ್ದಾರೆ. 

ನವದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಮಂಗಳವಾರ ಲೋಕಸಭೆಯಲ್ಲಿ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಭರ್ಜರಿ ವಾಕ್ಸಮರ ನಡೆಸಿದ್ದಾರೆ. ಮಣಿಪುರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೌನ ಮುರಿಯುವ ಸಲುವಾಗಿಯೇ ನಾವು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇವೆ. ಇಲ್ಲಿ ನಮಗೆ ಸೋಲು, ಗೆಲುವು ಮುಖ್ಯವಲ್ಲ ಎಂದು ವಿಪಕ್ಷಗಳು ವಾದಿಸಿದ್ದರೆ, ಇದು ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ಬಡ ವ್ಯಕ್ತಿಯ ಪುತ್ರನ ವಿರುದ್ಧ ಮಂಡಿಸಲಾದ ಅವಿಶ್ವಾಸ ಗೊತ್ತುವಳಿ ಎಂದು ಬಿಜೆಪಿ ತಿರುಗೇಟು ನೀಡಿದೆ.

ಇದೇ ವೇಳೆ ವಿಪಕ್ಷ ನಾಯಕರು, ಬಿಜೆಪಿ ಹಿರಿಯ ನಾಯಕ ದಿ. ಅಟಲ್‌ ಬಿಹಾರಿ ವಾಜಪೇಯಿ (Atal Bihari vajpayi) ಅವರನ್ನು ಉದಾಹರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲಿಸಿ ಎಂದು ಟಾಂಗ್‌ ನೀಡಿದ ಘಟನೆಗೂ ಲೋಕಸಭೆಯ ಕಲಾಪ ಸಾಕ್ಷಿಯಾಯಿತು. ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಪರ ಚರ್ಚೆ ಆರಂಭಿಸಿದ ಕಾಂಗ್ರೆಸ್‌ನ ಗೌರವ್‌ ಗೊಗೋಯ್‌ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಸುರಿಸಿದರು. ಮಣಿಪುರದಲ್ಲಿ (Manipur violence) ಹಿಂಸಾಚಾರ ಆರಂಭವಾಗಿ ಇಷ್ಟುದಿನವಾದರೂ ಪ್ರಧಾನಿ ಮೋದಿ ಅಲ್ಲಿಗೇಕೆ ಭೇಟಿ ನೀಡಿಲ್ಲ? ರಾಜ್ಯದ ವಿಷಯದಲ್ಲಿ ಮೌನ ಮುರಿಯಲು ಅವರಿಗೆ 80 ದಿನಗಳೇಕೆ ಬೇಕಾಯಿತು? ಮುಖ್ಯಮಂತ್ರಿ ಬಿರೇನ್‌ ಸಿಂಗ್‌ (Biren Singh) ಅವರನ್ನೇಕೆ ಹುದ್ದೆಯಿಂದ ಕಿತ್ತುಹಾಕಿಲ್ಲ’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅನ್ನಭಾಗ್ಯ ಪಿತಾಮಹ ಸಿಎಂ ಸಿದ್ದರಾಮಯ್ಯ ಅಲ್ಲ, ಮಾಜಿ ಪ್ರಧಾನಿ ವಾಜಪೇಯಿ!

ಜೊತೆಗೆ, ಕೇಂದ್ರ ಸರ್ಕಾರ ಪದೇ ಪದೇ ಒಂದು ಭಾರತದ ಮಾತುಗಳನ್ನು ಆಡುತ್ತದೆ. ಆದರೆ ಅತ್ತ ಎರಡು ಮಣಿಪುರಗಳನ್ನು ಸೃಷ್ಟಿಸಿದೆ; ಒಂದು ಗುಡ್ಡದಲ್ಲಿ ವಾಸಿಸುವವರಿಗೆ, ಮತ್ತೊಂದು ಕಣಿವೆಯಲ್ಲಿ ವಾಸಿಸುವವರಿಗೆ. ಮಣಿಪುರ ಹೊತ್ತಿ ಉರಿಯುವಾಗ, ಇಡೀ ದೇಶ ಹೊತ್ತಿ ಉರಿಯುವಾಗ, ಮಣಿಪುರ ಎರಡು ಭಾಗವಾದಾಗ, ದೇಶದ ನಾಯಕರಾದ ಪ್ರಧಾನಿ ಸದನಕ್ಕೆ ಬಂದು ಮಣಿಪುರ ವಿಷಯದ ಬಗ್ಗೆ ಮಾತನಾಡಬೇಕು ಎನ್ನುವುದು ನಮ್ಮ ಬೇಡಿಕೆ. ಆದರೆ ಅವರು ಈ ವಿಷಯದಲ್ಲಿ ಮೌನ ವ್ರತ ಆಚರಿಸುತ್ತಿದ್ದಾರೆ. ಅವರು ಲೋಕಸಭೆಯಲ್ಲಾಗಲೀ, ರಾಜ್ಯಸಭೆಯಲ್ಲಾಗಲೀ ಈ ಕುರಿತು ಮಾತನಾಡುವುದೇ ಇಲ್ಲ. ಹೀಗಾಗಿ ಅವರ ಮೌನ ಮುರಿಯಲು ನಾವು ಇದೀಗ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇವೆ. ಇಲ್ಲಿ ನಮಗೆ ಸೋಲು, ಗೆಲುವು ಮುಖ್ಯವಲ್ಲ. ಮಣಿಪುರಕ್ಕೆ ನ್ಯಾಯ ಒದಗಿಸುವುದು ಮುಖ್ಯ ಎಂದು ಎಂದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೋವಿಡ್‌ 2ನೇ ಅಲೆಯಲ್ಲಿ ಜನರು ಆಕ್ಸಿಜನ್‌ ಇಲ್ಲದೇ ಉಸಿರಾಡಲು ಒದ್ದಾಡುತ್ತಿದ್ದಾಗ ಪ್ರಧಾನಿ ಬಂಗಾಳದಲ್ಲಿ ಮತ ಕೇಳುತ್ತಿದ್ದರು, ಮಣಿಪುರದಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿರುವಾಗ ಪ್ರಧಾನಿ ಕರ್ನಾಟಕದಲ್ಲಿ ಮತ ಯಾಚಿಸುತ್ತಿದ್ದರು. ದೇಶಕ್ಕಿಂತ ಅಧಿಕಾರವೇ ಮೇಲೆ ಎನ್ನುವ ಇದು ಯಾವ ರೀತಿಯ ರಾಷ್ಟ್ರೀಯತೆ ಎಂದು ಗೊಗೋಯ್‌ ಕಿಡಿಕಾರಿದರು. ಅಲ್ಲದೆ, ರಾಹುಲ್‌ ಗಾಂಧಿ, ಅಮಿತ್‌ ಶಾ ಅವರಿಗೆಲ್ಲಾ ಮಣಿಪುರ ಭೇಟಿ ಸಾಧ್ಯವಾದರೆ ಪ್ರಧಾನಿಗೆ ಏಕೆ ಸಾಧ್ಯವಿಲ್ಲ ಎಂದು ನಾನು ಪ್ರಶ್ನಿಸುತ್ತೇನೆ. ಅಲ್ಲದೆ ಪ್ರಧಾನಿ ತಮ್ಮ ನೇತೃತ್ವದಲ್ಲೇ ಸರ್ವಪಕ್ಷಗಳ ನಿಯೋಗವನ್ನು ಮಣಿಪುರಕ್ಕೆ ಕೊಂಡೊಯ್ದು ಅಲ್ಲಿನ ಪರಿಸ್ಥಿತಿ ಅವಲೋಕಿಸಬೇಕು’ ಎಂದು ಆಗ್ರಹಿಸಿದರು.

ವಾಜಪೇಯಿ ವಿಶ್ವದ ಸರ್ವಶ್ರೇಷ್ಠ ಸಂಸದೀಯ ಪಟು

ಚರ್ಚೆಯಲ್ಲಿ ಭಾಗಿಯಾಗಿದ್ದ ಡಿಎಂಕೆಯ ಟಿ.ಆರ್‌.ಬಾಲು (T.R. Balu) ಮಾತನಾಡಿ, ಗುಜರಾತ್‌ ಹಿಂಸಾಚಾರ (Gujarat riots) ನಡೆದಾಗ ಅಟಲ್‌ ಬಿಹಾರಿ ವಾಜಪೇಯಿ ರಾಜಧರ್ಮ ಪಾಲಿಸಿದ್ದರು. ಆದರೆ ಇಂದು ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ, ಅವರನ್ನು ನಗ್ನಗೊಳಿಸಿ ಅತ್ಯಾಚಾರ ನಡೆಸಿದಾಗ ನಾವು ರಾಜಧರ್ಮ ಪಾಲಿಸುತ್ತಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಟಾಂಗ್‌ ನೀಡಿದರು.

ಇನ್ನು ಚರ್ಚೆಯಲ್ಲಿ ಪಾಲ್ಗೊಂಡ ಟಿಎಂಸಿಯ ಸೌಗತಾ ರಾಯ್‌ ಪ್ರಧಾನಿ ಮೋದಿ ಒಕ್ಕೂಟ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದ್ದಾರೆ ಎಂದು ಟೀಕಿಸಿದರೆ, ಎನ್‌ಸಿಪಿಯ ಸುಪ್ರಿಯಾ ಸುಳೆ ಕೂಡಲೇ ಮಣಿಪುರ ಸಿಎಂ ರಾಜೀನಾಮೆಗೆ ಆಗ್ರಹಿಸಿದರು. ಇಂದು ಕೂಡಾ ಲೋಕಸಭೆಯಲ್ಲಿ ಗೊತ್ತುವಳಿ ಮೇಲಿನ ಚರ್ಚೆ ಮುಂದುವರೆಯಲಿದೆ.