ನವದೆಹಲಿ(ಮಾ.17): ಸಂವಿಧಾನಕ್ಕೆ ಕೆಲವೊಂದು ತಿದ್ದುಪಡಿಗಳನ್ನು ತರುವ ಮೂಲಕ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವುದು ಸೂಕ್ತ ಎಂದು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ‘ಒಂದು ದೇಶ ಒಂದು ಚುನಾವಣೆ’ಯ ಪರವಾಗಿ ಮಾತನಾಡುತ್ತಿರುವ ಹಂತದಲ್ಲೇ ಸಲ್ಲಿಕೆಯಾಗಿ, ಸಂಸತ್ತಿನ ಉಭಯ ಸದನಗಳಲ್ಲಿ ಮಂಗಳವಾರ ಮಂಡಿಸಲ್ಪಟ್ಟಿರುವ ವರದಿಯು ಸರ್ಕಾರದ ಕನಸಿಗೆ ನೀರೆರೆದಿದೆ. ಜೊತೆಗೆ, ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಆಗುವ ಹಲವು ಲಾಭಗಳ ಕುರಿತೂ ಸಮಿತಿ ವಿವರವಾಗಿ ಮಾಹಿತಿ ನೀಡಿದೆ.

ನಮ್ಮ ದೇಶ ಒಂದಲ್ಲಾ ಒಂದು ಚುನಾವಣೆ ಮೂಲಕ ವರ್ಷವಿಡೀ ಚುನಾವಣೆಯ ಗುಂಗಿನಲ್ಲೇ ಇರುತ್ತದೆ. ಇದು ಅಭಿವೃದ್ಧಿ ಕಾರ್ಯಗಳಿಗೆ ನಾನಾ ರೀತಿಯಲ್ಲಿ ಅಡ್ಡಿ ಮಾಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಸಂವಿಧಾನಕ್ಕೆ ಕೆಲವೊಂದು ಬದಲಾವಣೆ ತರುವ ಮೂಲಕ ಏಕಕಾಲಕ್ಕೆ ಚುನಾವಣೆ ನಡೆಸಬಹುದು. ಹಾಗೆಂದು ಈ ಪರಿಕಲ್ಪನೆ ಭಾರತಕ್ಕೆ ಹೊಸದೇನಲ್ಲ. 1952, 1957, 1962ರಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆ ನಡೆದಿದ್ದವು. ಆದರೆ 1968, 1969ರಲ್ಲಿ ಕೆಲವೊಂದು ರಾಜ್ಯಗಳಲ್ಲಿ ವಿಧಾನಸಭೆ ಅವಧಿಪೂರ್ವ ವಿಸರ್ಜನೆಯಾದ ಕಾರಣ, ನಂತರದ ದಿನಗಳಲ್ಲಿ ಏಕಕಾಲಕ್ಕೆ ಚುನಾವಣೆ ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ.

ಬದಲಾವಣೆ ಅಗತ್ಯ:

ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿ ವ್ಯವಸ್ಥೆ ಜಾರಿಗೆ ಸಂವಿಧಾನಕ್ಕೆ ಕೆಲವೊಂದು ಬದಲಾವಣೆ ತರಬೇಕಾಗಿ ಬರಬಹುದು. ಜೊತೆಗೆ ಲೋಕಸಭೆ ಮತ್ತು ವಿಧಾನಸಭೆ ಅವಧಿಯನ್ನು ಹೊಂದಾಣಿಕೆ ಮಾಡಲು ಕೆಲವೊಂದು ವಿಧಾನಸಭೆಯ ಅವಧಿ ಕಡಿತ ಅಥವಾ ಕೆಲವೊಂದು ವಿಧಾನಸಭೆಯ ಅವಧಿ ಹೆಚ್ಚಳ ಮಾಡಬೇಕಾಗಿ ಬರಬಹುದು. ಇದನ್ನು ರಾಜಕೀಯ ಪಕ್ಷಗಳ ಸಹಮತದೊಂದಿಗೆ ಜಾರಿಗೆ ತರಬಹುದು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಲಾಭ ಏನು?:

ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ, ಚುನಾವಣೆ ನಡೆಸಲು ಸರ್ಕಾರಗಳು ಮಾಡಬೇಕಾದ ಭಾರೀ ವೆಚ್ಚ ಉಳಿಸಬಹುದು. ರಾಜಕೀಯ ಪಕ್ಷಗಳು ಕೂಡ ಚುನಾವಣಾ ವೆಚ್ಚದ ಹೊರೆಯಿಂದ ಪಾರಾಗಬಹುದು. ಅಲ್ಲದೆ ಚುನಾವಣೆಗೆ ಬಳಕೆಯಾಗುವ ಭಾರೀ ಮಾನವ ಸಂಪನ್ಮೂಲವನ್ನು ಬೇರೆ ಉದ್ದೇಶಗಳಿಗೆ ಸದ್ಬಳಕೆ ಮಡಬಹುದು. ಜೊತೆಗೆ ಪದೇ ಪದೇ ಚುನಾವಣೆಗಳಿಂದಾಗಿ ನೀತಿ ಸಂಹಿತೆ ಜಾರಿಯಾಗಿ ಈ ಅವಧಿಯಲ್ಲಿ ಅಭಿವೃದ್ಧಿ ಕಾರ‍್ಯ ಕುಂಠಿತಗೊಳ್ಳುತ್ತವೆ. ಹೀಗಾಗಿ ದೇಶದ ಜನರು ಚುನಾವಣೆ ಬಗ್ಗೆ ತಾತ್ಸಾರ ಮನೋಭಾವನೆ ಹೊಂದುವಂತಾಗಿದೆ. ಹೀಗಾಗಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆದರೆ, ಜನರಲ್ಲಿ ಮರಳಿ ಚುನಾವಣೆ ಕುರಿತು ಆಸಕ್ತಿ ಮೂಡಬಹುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಹಲವು ಶಿಫಾರಸು:

1999ರಲ್ಲಿ ಅಂದಿನ ಕಾನೂನು ಆಯೋಗದ ಮುಖ್ಯಸ್ಥ ಬಿ.ಪಿ.ಜೀವನ್‌ ರೆಡ್ಡಿ ನೇತೃತ್ವದ ಸಮಿತಿ ಮತ್ತು ಕೆಲ ವರ್ಷಗಳ ಹಿಂದೆ ನ್ಯಾ. ಬಿ.ಎಸ್‌ ಚೌಹಾಣ್‌ ನೇತೃತ್ವದ ಕಾನೂನು ಆಯೋಗಗಳು ಒಂದು ದೇಶ ಒಂದು ಚುನಾವಣೆಯ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದ್ದವು.

ಲಾಭ ಏನು?

- ಸರ್ಕಾರಗಳಿಗೆ ಚುನಾವಣಾ ವೆಚ್ಚ ತಗ್ಗುತ್ತದೆ

- ಪದೇ ಪದೇ ನೀತಿ ಸಂಹಿತೆ ತಾಪತ್ರಯ ಇಲ್ಲ

- ಪಕ್ಷಗಳ ಚುನಾವಣಾ ವೆಚ್ಚವೂ ಭಾರೀ ಇಳಿಕೆ

- ಮಾನವ ಸಂಪನ್ಮೂಲ ವ್ಯರ್ಥ ತಡೆಯಬಹುದು