ಬೆಂಗಳೂರು[ಡಿ.15]: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಂಸತ್‌ನಲ್ಲಿ 100 ಕೆ.ಜಿ. ಧಾರವಾಡ ಪೇಡಾ ಹಂಚಿ ಸಂಭ್ರಮಿಸಿದ್ದಾರೆ. ಆದರೆ, ಜೋಶಿ ಈ ರೀತಿ ಪೇಡಾ ಹಂಚಲು ಕಾರಣರಾಗಿದ್ದು ಮಾತ್ರ ಪ್ರಧಾನಿ ನರೇಂದ್ರ ಮೋದಿ ಎನ್ನಲಾಗಿದೆ.

ಸಂಸದೀಯ ಸಭೆಯಲ್ಲಿ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಶ್ಲಾಘನೆ ಮಾಡಿದ್ದ ಪ್ರಧಾನಿ ಮೋದಿ ಬಳಿಕ, ಹಾಸ್ಯ ಮಾಡುತ್ತಾ ನಮಗೆ ಧಾರವಾಡ ಪೇಡಾ ಕೊಡುವುದಿಲ್ಲವೇ ಎಂದು ಪ್ರಹ್ಲಾದ್‌ ಜೋಶಿ ಅವರನ್ನು ಕೇಳಿದ್ದರಂತೆ. ಮೋದಿಯವರು ಹಾಸ್ಯಧಾಟಿಯಲ್ಲಿ ಹೇಳಿದ ಮಾತನ್ನು ಪ್ರಹ್ಲಾದ್‌ ಜೋಶಿ ನಿಜವಾಗಿಸಿದ್ದು, ಧಾರವಾಡದಿಂದ 100 ಕೆ.ಜಿ. ಧಾರವಾಡ ಪೇಡಾವನ್ನು ವಿಮಾನದಲ್ಲಿ ದೆಹಲಿಗೆ ತರಿಸಿಕೊಂಡು ಗುರುವಾರ ಸಂಸತ್ತಿನಲ್ಲಿ ಹಂಚಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮೋದಿಯವರು ಪ್ರವಾಸದಲ್ಲಿರುವ ಕಾರಣ ಅವರಿಗೆ ಪೇಡಾ ವಿತರಿಸಿಲ್ಲ. ವಾಪಸ್‌ ಬಂದ ನಂತರ ಅವರಿಗೂ ವಿತರಿಸಲಾಗುವುದೆಂದು ಜೋಶಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಪೇಡಾ ಹಂಚಿದ್ದು ಬೇರೆ ಕಾರಣಕ್ಕೆ:

ಸಂಸತ್ತಿನಲ್ಲಿ ಪೇಡಾ ಹಂಚಿಕೆ ಸಂಬಂಧ ರಾಯಚೂರಿನಲ್ಲಿ ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಹ್ಲಾದ್‌ ಜೋಶಿ, ನಾನು ಸಂಸತ್‌ನಲ್ಲಿ ಪೇಡಾ ಹಂಚಿದ್ದೇ ಬೇರೆ ಕಾರಣಕ್ಕಾಗಿ. ಆದರೆ, ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ಲಭಿಸಿದ ಕಾರಣಕ್ಕಲ್ಲ. ಆದರೆ, ಅದೇ ಕಾರಣಕ್ಕಾಗಿ ಪೇಡಾ ಹಂಚಿದ್ದೇನೆ ಎಂದುಕೊಂಡರೂ ಅದರಲ್ಲೇನೂ ತಪ್ಪಿಲ್ಲ ಎಂದಿದ್ದಾರೆ.