ಸಂಸತ್‌ ದಾಳಿಕೋರರರು ದೆಹಲಿ ಕೋರ್ಟ್‌ನ ಎದುರು ಮಾತನಾಡಿದ್ದು, ಪೊಲೀಸರು ನಮತೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ವಿಪಕ್ಷಗಳ ಜೊತೆ ನಂಟು ಇದೆ ಎನ್ನುವುದನ್ನು ಒಪ್ಪಿಕೊಳ್ಳುವಂತೆ ಹಿಂಸೆ ನೀಡುತ್ತಿದ್ದಾರೆ. ಕರೆಂಟ್‌ ಶಾಕ್‌ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ 

ನವದೆಹಲಿ (ಜ.31): ಕಳೆದ ಡಿ.13ರಂದು ಲೋಕಸಭೆಯ ಒಳಗೆ ಹಾಗೂ ಸಂಸತ್ತಿನ ಆವರಣದಲ್ಲಿ ಹೊಗೆ ಬಾಂಬ್‌ ಸಿಡಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮೈಸೂರಿನ ಮನೋರಂಜನ್‌ ಡಿ ಸೇರಿ ಐವರು ಆರೋಪಿಗಳು ‘ವಿಪಕ್ಷಗಳೊಂದಿಗೆ ನಿಮಗೆ ಸಂಬಂಧವಿದೆ ಎಂಬುದನ್ನು ಒಪ್ಪಿಕೊಳ್ಳಿ’ ಎಂದು ದೆಹಲಿ ಪೊಲೀಸರು ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಬಂಧಿತ ಮನೋರಂಜನ್‌ ಡಿ, ಸಾಗರ್‌ ಶರ್ಮಾ, ಲಲಿತ್‌ ಝಾ, ಅಮೋಲ್‌ ಶಿಂಧೆ ಹಾಗೂ ಮಹೇಶ್‌ ಕುಮಾವತ್ ಹೇಳಿಕೆ ನೀಡಿ, ‘70 ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ನಮಗೆ ಒತ್ತಾಯ ಮಾಡಲಾಗಿದೆ. ಯುಎಪಿಎ ಅಡಿಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ನಮಗೆ ಸಂಬಂಧವಿದೆ ಎಂಬ ದಾಖಲೆಗೆ ಸಹಿ ಹಾಕುವಂತೆ ಹಾಗೂ ತಪ್ಪೊಪ್ಪಿಕೊಳ್ಳುವಂತೆ ನಮಗೆ ಹಿಂಸೆ ನೀಡಲಾಗುತ್ತಿದೆ. ಕರೆಂಟ್‌ ಶಾಕ್‌ ಕೊಡಲಾಗುತ್ತಿದೆ’ ಎಂದು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ. ಬಳಿಕ ಆರೋಪದ ಕುರಿತು ಉತ್ತರಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ಪ್ರಕರಣದ ಮತ್ತೊಬ್ಬ ಆರೋಪಿ ನೀಲಂ ಆಜಾದ್‌ ಸೇರಿ ಎಲ್ಲಾ 6 ಆರೋಪಿಗಳ ನ್ಯಾಯಾಂಗ ಬಂಧನವನ್ನು ಮಾರ್ಚ್‌ 1ರ ತನಕ ವಿಸ್ತರಿಸಿದೆ. ಈ ವೇಳೆ ಮುಂದಿನ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಲಾಗಿದೆ.

2001ರ ಡಿ.13ರಂದು ಭಾರತದ ಸಂಸತ್ತಿನ ಮೇಲೆ ಉಗ್ರರು ದಾಳಿ ನಡೆಸಿದ ದಿನದಂದೇ 2023ರ ಡಿ.13ರಂದು ಆರು ಜನ ಆರೋಪಿಗಳು ನೂತನ ಸಂಸತ್‌ ಭವನದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಸಂದರ್ಶಕರ ಸೋಗಿನಲ್ಲಿದ್ದ ಇಬ್ಬರು ಆರೋಪಿಗಳು ಲೋಕಸಭೆಗೆ ಜಿಗಿದು ಹೊಗೆ ಬಾಂಬ್ ಸಿಡಿಸಿದ್ದರು. ಇದು ಭಾರೀ ಭದ್ರತಾ ಲೋಪಕ್ಕೆ ಕಾರಣವಾಗಿತ್ತು.

ಆರು ಆರೋಪಿಗಳ ಪೈಕಿ ಸಾಗರ್ ಶರ್ಮಾ, ಮನೋರಂಜನ್ ಡಿ, ಲಲಿತ್ ಝಾ, ಮಹೇಶ್ ಕುಮಾವತ್ ಮತ್ತು ಅಮೋಲ್ ಶಿಂಧೆ ಅವರು ಪಟಿಯಾಲಾ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ ಈ ಸಲ್ಲಿಕೆಯನ್ನು ಮಾಡಲಾಗಿದೆ. ತಮ್ಮ ಸೋಶಿಯಲ್‌ ಮೀಡಿಯಾ ಖಾತೆ, ಇಮೇಲ್‌ಗಳು ಮತ್ತು ಫೋನ್‌ಗಳ ತಮ್ಮ ಪಾಸ್‌ವರ್ಡ್‌ಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಗಳು ಅರ್ಜಿಯಲ್ಲಿ ತಿಳಿಸಿದ್ದಾರೆ.

ಸಂಸತ್ ದಾಳಿಕೋರರಿಗೆ ಪಾಸ್‌; ಪ್ರತಾಪ್‌ ಸಿಂಹ ಹೇಳಿಕೆ ದಾಖಲು: ದಾಳಿ ವೇಳೆ ಬಿಜೆಪಿ ಸಂಸದರು ಪರಾರಿ; ರಾಹುಲ್‌ ಗಾಂಧಿ ವ್ಯಂಗ್ಯ

ಪಾಲಿಗ್ರಾಫ್ ಅಥವಾ ನಾರ್ಕೋ ಪರೀಕ್ಷೆಯನ್ನು ಇಬ್ಬರು ಆರೋಪಿಗಳಿಗೆ ನಡೆಸಲಾಗಿದೆ. ಈ ವೇಳೆ ರಾಜಕೀಯ ಪಕ್ಷ ಅಥವಾ ನಾಯಕನ ಹೆಸರನ್ನು ಹೇಳುವಂತೆ ಒತ್ತಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಆರೋಪಿ ನೀಲಂ ಆಜಾದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಇದಕ್ಕೂ ಮುನ್ನ ಆಜಾದ್‌ಗೆ ಎಫ್‌ಐಆರ್‌ನ ಪ್ರತಿಯನ್ನು ನೀಡುವಂತೆ ದೆಹಲಿ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು. ಆದರೆ, ದೆಹಲಿ ಪೊಲೀಸರು ಇದನ್ನು ಪ್ರಶ್ನಿಸಿದ ನಂತರ ದೆಹಲಿ ಹೈಕೋರ್ಟ್ ಈ ಆದೇಶಕ್ಕೆ ತಡೆ ನೀಡಿತು. ನ್ಯಾಯಾಲಯದ ಮುಂದೆ ಅರ್ಜಿ ವಿಚಾರಣೆಗೆ ಬಾಕಿ ಇದೆ.

ಸಂಸತ್ ಭದ್ರತೆಯಲ್ಲಿ ದೊಡ್ಡ ಬದಲಾವಣೆ: ದೆಹಲಿ ಪೊಲೀಸರ ಬದಲು ಇನ್ಮುಂದೆ ಸಿಐಎಸ್‌ಎಫ್‌ ರಕ್ಷಣೆ