Asianet Suvarna News Asianet Suvarna News

ಒಬಿಸಿ ಮಸೂದೆಗೆ ರಾಷ್ಟ್ರಪತಿ ಸಹಿ ಬಾಕಿ: ರಾಜ್ಯಸಭೆಯಲ್ಲೂ ವಿಧೇಯಕ ಅಂಗೀಕಾರ

* ಮೀಸಲು ನಿಗದಿ ಅಧಿಕಾರ ಇನ್ನು ರಾಜ್ಯಗಳಿಗೆ

* ಒಬಿಸಿ ಮಸೂದೆಗೆ ರಾಷ್ಟ್ರಪತಿ ಸಹಿ ಬಾಕಿ

* ರಾಜ್ಯಸಭೆಯಲ್ಲೂ ವಿಧೇಯಕ ಅಂಗೀಕಾರ

Parliament passes Bill restoring States right to maintain OBC lists pod
Author
Bangalore, First Published Aug 12, 2021, 7:38 AM IST
  • Facebook
  • Twitter
  • Whatsapp

ನವದೆಹಲಿ(ಆ.12): ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯನ್ನು ತಯಾರಿಸುವ ಅಧಿಕಾರವನ್ನು ರಾಜ್ಯಗಳಿಗೇ ಬಿಟ್ಟುಕೊಡುವ ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಬುಧವಾರ ರಾಜ್ಯಸಭೆ ಕೂಡ ಸರ್ವಾನುಮತದ ಅಂಗೀಕಾರ ನೀಡಿದೆ. ಇದರೊಂದಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಈ ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ರೂಪುಗೊಳ್ಳಲು ರಾಷ್ಟ್ರಪತಿಗಳ ಅಂಕಿತವೊಂದೇ ಬಾಕಿ ಉಳಿದಿದೆ.

ಬುಧವಾರ ರಾಜ್ಯಸಭೆ ಕಲಾಪದಲ್ಲಿ ಸಂವಿಧಾನದ 137ನೇ ತಿದ್ದುಪಡಿ ವಿಧೇಯಕವಾದ ಈ ಮಸೂದೆಯ ಪರ 187 ಮತಗಳು ಚಲಾವಣೆಯಾದವು. ವಿಧೇಯಕದ ವಿರುದ್ಧ ಒಂದೇ ಒಂದು ಮತ ಕೂಡ ಬೀಳಲಿಲ್ಲ. ಈ ನಡುವೆ, ಮಸೂದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಬೇಕೆಂಬ ವಿಪಕ್ಷಗಳ ಸದಸ್ಯರ ಕೋರಿಕೆಯನ್ನು ಸದನ ತಿರಸ್ಕರಿಸಿತು.

ಮಸೂದೆ ಮಂಡಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ವೀರೇಂದ್ರಕುಮಾರ್‌, ‘ತಿದ್ದುಪಡಿಯಿಂದ ಒಬಿಸಿ ಸವಲತ್ತು ಪಡೆಯಲು 671 ಸಮುದಾಯಗಳಿಗೆ ಅನುಕೂಲವಾಗಲಿದೆ. ಸಮುದಾಯಗಳಿಗೆ ಒಬಿಸಿ ಸ್ಥಾನಮಾನ ನೀಡುವ ಅಧಿಕಾರ ರಾಜ್ಯಗಳಿಗೇ ಮತ್ತೆ ಪ್ರಾಪ್ತಿಯಾಗಲಿದೆ. ಇತ್ತೀಚಿನ ಸುಪ್ರೀಂ ಕೋರ್ಟ್‌ ಆದೇಶದಿಂದ ರಾಜ್ಯಗಳು ಒಬಿಸಿ ಸ್ಥಾನಮಾನ ನೀಡುವ ಅಧಿಕಾರ ಕಳೆದುಕೊಂಡಿದ್ದವು. ಆದರೆ ಸಾಂವಿಧಾನಿಕ ತಿದ್ದುಪಡಿಯಿಂದ ಈ ಗೊಂದಲ ನಿವಾರಣೆಯಾಗಲಿದೆ’ ಎಂದರು. ಅಲ್ಲದೆ, ವಿಧೇಯಕ ಅಂಗೀಕಾರಕ್ಕೆ ಸಹಕರಿಸುತ್ತಿರುವ ಎಲ್ಲ ಪಕ್ಷಗಳ ಸದಸ್ಯರಿಗೂ ಧನ್ಯವಾದ ಸಲ್ಲಿಸಿದರು.

ಈ ನಡುವೆ ಮತನಾಡಿದ ಹಲವು ಪ್ರತಿಪಕ್ಷಗಳ ಸದಸ್ಯರು, ‘ಮೀಸಲು ಮಿತಿಯನ್ನು ಶೇ.50ಕ್ಕಿಂತ ಹೆಚ್ಚಿಸಲು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು. ಆದರೆ ಇದಕ್ಕೆ ಪ್ರತ್ಯೇಕ ಚರ್ಚೆಯ ಅಗತ್ಯವಿದೆ. ಈ ಹಂತದಲ್ಲಿ ಇದು ಸಾಧ್ಯವಾಗದು ಎಂದು ಸರ್ಕಾರ ನಿರಾಕರಿಸಿತು. ಬಳಿಕ ವಿಪಕ್ಷಗಳು ತಂದ ತಿದ್ದುಪಡಿ ಸೂಚನೆಗಳೂ ತಿರಸ್ಕೃತಗೊಂಡವು.

ಸಂಸತ್ತಿನ ಉಭಯ ಕಲಾಪಗಳು ಆರಂಭವಾದ ಮೊದಲ ದಿನದಿಂದಲೂ ಪೆಗಾಸಸ್‌ ಬೇಹುಗಾರಿಕೆ ಮತ್ತು ಕೃಷಿ ಕಾಯ್ದೆಗಳ ವಿಚಾರಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಭಾರೀ ಗದ್ದಲ ಮತ್ತು ಕೋಲಾಹಲ ಎಬ್ಬಿಸಿದ್ದವು. ಆದರೆ ಒಬಿಸಿ ಪಟ್ಟಿತಯಾರಿಸುವ ಅಧಿಕಾರವನ್ನು ರಾಜ್ಯಗಳಿಗೇ ನೀಡುವ ವಿಧೇಯಕ ಕುರಿತಾದ ಚರ್ಚೆ ವೇಳೆ ವಿಪಕ್ಷಗಳು ತಮ್ಮ ಹಟಮಾರಿ ಧೋರಣೆಯನ್ನು ಬಿಟ್ಟು, ಬುಧವಾರದ ರಾಜ್ಯಸಭೆ ಕಲಾಪದಲ್ಲಿ ತೊಡಗಿದವು. ಈ ಮಸೂದೆ ಬಗ್ಗೆ ವಿಪಕ್ಷಗಳು ಮತ್ತು ಆಡಳಿತಾರೂಢ ಸದಸ್ಯರು 5 ಗಂಟೆವರೆಗೆ ಚರ್ಚೆ ನಡೆಸಿದರು. ಲೋಕಸಭೆಯು ಬುಧವಾರವಷ್ಟೇ ಮಸೂದೆ ಪಾಸು ಮಾಡಿತ್ತು.

Follow Us:
Download App:
  • android
  • ios