Asianet Suvarna News Asianet Suvarna News

ಖರ್ಗೆ ಸದನ ಬದಲಿಸಿದ್ರು, ಆಜಾದ್ ಪಾರ್ಟಿ ತೊರೆದ್ರು, 1 ಉತ್ಪನ್ನದ ವಿಫಲ ಲಾಂಚ್ ರಿಸಲ್ಟ್; ಮೋದಿ ತಿರುಗೇಟು!

ರಾಷ್ಟ್ರಪತಿ  ಭಾಷಣದ ಮೇಲಿನ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಮಾತಿನ ಆರಂಭದಲ್ಲಿ ಕಾಂಗ್ರೆಸ್ ಸೇರಿದ ವಿಪಕ್ಷಗಳಿಗೆ ಮುಂದಿನ ಚುನಾವಣೆ ಹಾಗೂ ದಶಕಗಳ ಬಿಜೆಪಿ ಗೆಲುವಿನ ಸೂಚನೆ ನೀಡಿದ್ದಾರೆ. 

Parliament budget session PM Modi speech on Motion of Thanks on the President address ckm
Author
First Published Feb 5, 2024, 5:21 PM IST

ನವದೆಹಲಿ(ಫೆ.05) ವಿಪಕ್ಷಗಳು ಒಂದು ಸಂಕಲ್ಪ ಮಾಡಿದೆ. ಅವರ ಮಾತುಗಳಿಂದ ಭಾರತೀಯರಿಗೂ ಸ್ಪಷ್ಟವಾಗುತ್ತಿದೆ. ಇನ್ನು ಹಲವು ವರ್ಷಗಳ ಕಾಲ ವಿಪಕ್ಷ ಸ್ಥಾನದಲ್ಲಿ ಕೂರುವ ಎಲ್ಲಾ ಸಂಕಲ್ಪವನ್ನು ವಿಪಕ್ಷ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಹೊಸ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿರುವ ಸೆಂಗೋಲ್‌ಗೆ ವಂದನೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ವಿಪಕ್ಷಗಳ ಮಾತಿನಿಂದ ಒಂದು ಮಾತು ಭಾರತೀಯರಿಗೆ ಸ್ಪಷ್ಟವಾಗುತ್ತಿದೆ. ಹಲವು ದಶಕಗಳ ವಿಪಕ್ಷದಲ್ಲಿರುವುದು ಖಚಿತವಾಗಿದೆ. ಇದನ್ನು ವಿಪಕ್ಷಗಳು ಸಂಕಲ್ಪ ಮಾಡಿದಂತೆ ಕಾಣುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರೆ. 

ನಾರಿಶಕ್ತಿ, ಯುವಶಕ್ತಿ, ಬಡ ಸಮೂಹ, ರೈತರು ಈ ನಾಲ್ಕು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ನಾಲ್ಕು ಸ್ಥಂಬಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಒಂದು ಉತ್ತಮ ವಿಪಕ್ಷವಾಗವು ಅವಕಾಶವಿತ್ತು. ಕಳೆದ 10 ವರ್ಷದಲ್ಲಿ ಕಾಂಗ್ರೆಸ್ ಈ ಅವಕಾಶವನ್ನು ಕೈಯಾರೇ ಚೆಲ್ಲಿದೆ. ಯುವ ನಾಯಕರಿಗೆ ಅವಕಾಶವನ್ನೇ ನೀಡಲಿಲ್ಲ. ಅವರ ಧ್ವನಿಯನ್ನು ಅಡಗಿಸಲಾಗಿತ್ತು. ತಯಾರಿ ಮಾಡಿಕೊಂಡು ಬಂದು ಸಲಹೆ ನೀಡಬಹುದಿತ್ತು ಎಂದು ಮೋದಿ ಹೇಳಿದ್ದಾರೆ.

ನಮ್ಮ ಮಲ್ಲಿಕಾರ್ಜುನ ಖರ್ಗೆ ಈ ಸದನದಿಂದ ಮತ್ತೊಂದು ಸದನಕ್ಕೆ ಶಿಫ್ಟ್ ಆಗಿದ್ದಾರೆ. ಗುಲಾಂ ನಬಿ ಆಜಾದ್ ಪಾರ್ಟಿಯನ್ನು ಬಿಟ್ಟು ಹೋದರು. ಇದು ಪರಿವಾರ ರಾಜಕೀಯದ ಫಲಿತಾಂಶ. ಒಂದು ಉತ್ಪನ್ನವನ್ನು ಪ್ರತಿ ಬಾರಿ ಲಾಂಚ್ ಮಾಡಲು ಹೋಗಿ ವಿಫಲವಾದ ಕತೆ ಇದು ಎಂದು ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ. 

ಒಂದು ಕುಟುಂಬದ ಹತ್ತು ಮಂದಿ ರಾಜಕೀಯದಲ್ಲಿರುತ್ತಾರೆ. ಇದು ವಿಷವಲ್ಲ. ಆದರೆ ಎಲ್ಲವನ್ನೂ ಒಂದು ಪಾರ್ಟಿ ನಿರ್ಧರಿಸುವುದು ಆತಂಕದ ವಿಚಾರ. ಒಂದು ಪರಿವಾರವೇ ಪಾರ್ಟಿ ಆದಾಗ ಸಮಸ್ಯೆ ಎದುರಾಗುತ್ತದೆ. ತಂದೆ ಪಾರ್ಟಿ ಅಧ್ಯಕ್ಷ, ಬಳಿಕ ಮಗ ಅಧ್ಯಕ್ಷ, ಬಳಿಕ ಮೊಮ್ಮಗ ಅಧ್ಯಕ್ಷ ಇದು ಸಮಸ್ಯೆ ಎಂದು ಮೋದಿ ಹೇಳಿದ್ದಾರೆ. 

ಕಾಂಗ್ರೆಸ್ ಕ್ಯಾನ್ಸಲ್ ಪಾರ್ಟಿ ಆಗಿದೆ. ವಂದೇ ಭಾರತ್ ಘೋಷಣೆ ಮಾಡಿದರೆ ಕಾಂಗ್ರೆಸ್ ಕ್ಯಾನ್ಸಲ್ ಎಂದಿತು,ಜಿ20 ಅಧ್ಯಕ್ಷತೆ ವಹಿಸಿದಾಗ ಕಾಂಗ್ರೆಸ್ ಕ್ಯಾನ್ಸಲ್ ಎಂದಿತು. ಕಾಂಗ್ರೆಸ್ ಎಲ್ಲವನ್ನೂ ಕ್ಯಾನ್ಸಲ್ ಎನ್ನುತ್ತಲೇ ಕ್ಯಾನ್ಸಲ್ ಪಾರ್ಟಿಯಾಗಿದೆ.  3ನೇ ಅವಧಿಯ ಸರ್ಕಾರದಲ್ಲಿ ಭಾರತ 3ನೇ ಅತೀ ದೊಡ್ಡ ಆರ್ಥಿಕತೆಯಾಗಲಿದೆ. ಇದು ಮೋದಿ ಗ್ಯಾರೆಂಟಿ ಎಂದು ಮೋದಿ ಹೇಳಿದ್ದಾರೆ.

2014ರಲ್ಲಿ ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು. ಕಾಂಗ್ರೆಸ್ ಸರ್ಕಾರದ ಹಣಕಾಸು ಸಚಿವರು ಮಂಡಿಸಿದ ಬಜೆಟ್ ವೇಳೆ ಆಡಿದ ಮಾತನ್ನು ಉಲ್ಲೇಖಿಸುತ್ತಿದ್ದೇನೆ. 2014ರಲ್ಲಿ ಭಾರತ 11ನೇ ಅರ್ಥವ್ಯವಸ್ಥೆ ತಲುಪಿರುವುದನ್ನು ಉಲ್ಲೇಖಿಸಿದ್ದಾರೆ. ಅಂದರೆ 11ನೇ ಸ್ಥಾನಕ್ಕೆ ತಲುಪಿರುವುದು ಅಷ್ಟು ಸಂತಸವಾಗಿದ್ದರೆ, 5ನೇ ಸ್ಥಾನಕ್ಕೆ ತಲುಪಿರುವುದು ಇನ್ನು ಸಂತಸದ ವಿಚಾರ ಎಂದು ಮೋದಿ ಹೇಳಿದ್ದಾರೆ.

ಮುಂದಿನ 3 ದಶಕಗಳ ಕಾಲ ಭಾರತಕ್ಕೆ ಉತ್ತಮ ಕಾಲ. ಈ ಮೂರು ದಶಕಗಳಲ್ಲಿ ಭಾರತ 3ನೇ ಅರ್ಥವ್ಯವಸ್ಥೆಗೆ ತಲುಪಲಿದೆ ಎಂದು ಅಂದಿನ ಹಣಕಾಸು ಸಚಿವರು ಹೇಳಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ದೂರದೃಷ್ಟಿಯಾಗಿತ್ತು. ಮೂರನೇ ಸ್ಥಾನಕ್ಕೆ ತಲುಪಲು ಕಾಂಗ್ರೆಸ್ 30 ವರ್ಷಗಳ ಕಾಲವಕಾಶ ನೀಡಿತ್ತು. ಆದರೆ 30 ವರ್ಷ ಬೇಡ, ಇದು ಮೋದಿ ಗ್ಯಾರೆಂಟಿ, ನನ್ನ ಮೂರನೇ ಅವಧಿಯಲ್ಲಿ ಭಾರತ 3ನೇ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ಗೆ ಭಾರತ 11ನೇ ಅರ್ಥವ್ಯವಸ್ಥೆ ತಲುಪಿದಾಗ ಖುಷಿಯಾಗಿದ್ದರೆ, ಇದೀಗ 5ನೇ ಸ್ಥಾನ ತಲುಪಿದಾಗಲೂ ನಿಮಗೆ ಖುಷಿಯಾಗಬೇಕು ಎಂದು ಮೋದಿ ಹೇಳಿದ್ದಾರೆ.

ದೇಶದಲ್ಲಿ ಯಾವ ರೀತಿ ಅಭಿವೃದ್ಧಿ ಕಾಮಗಾರಿಗಳು, ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಕಾಂಗ್ರೆಸ್ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ನಗರದ ಬಡವರಿಗೆ 80 ಲಕ್ಷ ಮನೆ ನಿರ್ಮಿಸಿದ್ದೇವೆ. ಆದರೆ ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲು 100 ವರ್ಷ ತೆಗೆದುಕೊಳ್ಳಲಿದೆ. 40 ಸಾವಿರ ರೈಲ್ವೇ ಟ್ರಾಕ್ ಎಲೆಕ್ಟ್ರಿಕ್‌ಫಿಕೇಶನ್ ಮಾಡಲಾಗಿದೆ. ಇದನ್ನು ಕಾಂಗ್ರೆಸ್ 40 ವರ್ಷ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ಮಾನಸಿಕತೆ ಹೇಗೆ ಅಂದರೆ ಈ ದೇಶದ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಲಿಲ್ಲ. ಆಗಸ್ಟ್ 15ರಂದು ನೆಹರೂ ತಮ್ಮ ಭಾಷಣದಲ್ಲಿ ಸಾಮಾನ್ಯ ಭಾರತೀಯರಲ್ಲಿ ಕಠಿಣ ಪರಿಶ್ರಮದ ಸಾಮರ್ಥ್ಯವಿಲ್ಲ. ಭಾರತೀಯರು ಆಲಸಿಗಳು, ಯುರೋಪ್, ಚೀನಾ ಸೇರಿದಂತೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಆ ಸಾಮರ್ಥ್ಯವಿಲ್ಲ ಎಂದಿದ್ದರು. 

ಇಂದಿರಾ ಗಾಂಧಿ ಆಲೋಚನೆ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ, ಕೆಂಪು ಕೋಟೆ ಭಾಷಣದಲ್ಲಿ ಇಂದಿರಾ ಗಾಂಧಿ, ಶುಭ ಕಾರ್ಯ ಪೂರ್ಣಗೊಳಿಸುವ ಮೊದಲೇ ನಾವು ಆತ್ಮತೃಪ್ತರಾಗುತ್ತೇವೆ. ದೇಶದಲ್ಲಿ ಕಾಂಗ್ರೆಸ್ ಸೋಲಿನ ಭಾವನೆ ಮೂಡಿಸಿದ್ದರು. ಕಾಂಗ್ರೆಸ್ ಒಂದು ಪರಿವಾರಕ್ಕಿಂತ ಮೇಲೆ ಏನೂ ಯೋಚನೆ ಮಾಡುವುದಿಲ್ಲ, ಕೆಲಸವೂ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
 

Follow Us:
Download App:
  • android
  • ios