Covid Vaccination: ಮಕ್ಕಳಿಗೆ ಲಸಿಕೆ ಹಾಕಿಸಲು ವಿದೇಶಕ್ಕೆ ಹಾರುತ್ತಿರುವ ಪೋಷಕರು!
* ಭಾರತದಲ್ಲಿ ಸದ್ಯ 18 ವರ್ಷ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುತ್ತಿಲ್ಲ
* ಗುಜರಾತಿನಲ್ಲಿ ಅಮೆರಿಕ, ಇಸ್ರೇಲ್, ದುಬೈಗೆ ತೆರಳಿ ಮಕ್ಕಳಿಗೆ ಲಸಿಕೆ
* ಮಕ್ಕಳಿಗೆ ಲಸಿಕೆ ಹಾಕಿಸಲು ವಿದೇಶಕ್ಕೆ ಹಾರುತ್ತಿರುವ ಪೋಷಕರು
ಅಹಮದಾಬಾದ್/ ಸೂರತ್(ಡಿ.23): ಭಾರತದಲ್ಲಿ ಸದ್ಯ 18 ವರ್ಷ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುತ್ತಿಲ್ಲ. ಆದರೆ ಅಮೆರಿಕ, ಇಸ್ರೇಲ್‌ನಲ್ಲಿ 5-11 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಗುಜರಾತಿನಲ್ಲಿ ಹಲವು ಮಂದಿ ಮಕ್ಕಳಿಗೆ ಲಸಿಕೆ ಕೊಡಿಸುವ ಉದ್ದೇಶದಿಂದಲೇ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಗುಜರಾತಿನ ರಾಜ್‌ದೀಪ್ ಬ್ರಹ್ಮಭಟ್ ಮತ್ತು ಸಿದ್ಧಿ ದಂಪತಿ ಇತ್ತೀಚೆಗಷ್ಟೇ ಅಮೆರಿಕಕ್ಕೆ ತೆರಳಿ 19 ದಿನ ಅಲ್ಲಿಯೇ ನೆಲೆಸಿ ತಮ್ಮ ಇಬ್ಬರು 5 ವರ್ಷದ ಅವಳಿ ಮಕ್ಕಳಿಗೆ ಲಸಿಕೆ ಹಾಕಿಸಿಕೊಂಡು ಬಂದಿದ್ದಾರೆ. ‘2ನೇ ಅಲೆ ಸಂದರ್ಭದಲ್ಲಿ ಕುಟುಂಬದ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡೆವು. ಲಸಿಕೆ ನಂತರ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಧರಿಸಿದ್ದವು. ಹೀಗಾಗಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಮೆರಿಕಕ್ಕೆ ತೆರಳಿ ಲಸಿಕೆ ಹಾಕಿಸಿದೆವು. ಇಬ್ಬರು ಮಕ್ಕಳೂ ಅಮೆರಿಕದಲ್ಲಿ ಹುಟ್ಟಿದ್ದರಿಂದ ಅಲ್ಲಿನ ಪೌರತ್ವ ಹೊಂದಿದ್ದಾರೆ’ ಎಂದು ರಾಜ್‌ದೀಪ್ ತಿಳಿಸಿದ್ದಾರೆ.
ಇನ್ನೊಂದೆಡೆ ಸೂರತ್ ವಜ್ರೋದ್ಯಮಿ ಅಭಿಷೇಕ್ ಪಟೇಲ್ ಅವರು ಇಸ್ರೇಲ್‌ಗೆ ತೆರಳಿ ತಮ್ಮ 6 ವರ್ಷದ ಪುತ್ರ ಹೃಧಾನ್‌ಗೆ ಲಸಿಕೆ ಹಾಕಿಸಿಕೊಂಡು ಬಂದಿದ್ದಾರೆ. ಪಟೇಲ್ ಇದಕ್ಕಾಗಿ 2.28 ಲಕ್ಷ ರು. ವನ್ನು ವ್ಯಯಿಸಿದ್ದಾರೆ.
ಇನ್ನು ದುಬೈಗೆ ಕೂಡ ತೆರಳಿ ಕೆಲವರು ಮಕ್ಕಳಿಗೆ ಲಸಿಕೆ ಹಾಕಿಸಿಕೊಂಡು ಬರುತ್ತಿದ್ದಾರೆ ಎಂದು ವೈದ್ಯರೊಬ್ಬರನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಅಮೆರಿಕದಲ್ಲಿ 5-11 ವರ್ಷದ ಮಕ್ಕಳಿಗೆ ಫೈಝರ್ ಮತ್ತು ಮಾಡೆರ್ನಾ ಲಸಿಕೆ ನೀಡಲಾಗುತ್ತಿದೆ. ಇಸ್ರೇಲ್‌ನಲ್ಲಿ ಫೈಝರ್ ಲಸಿಕೆಯನ್ನು ನೀಡಲಾಗುತ್ತಿದೆ.