ಕೇರಳದಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟ 17 ವರ್ಷದ ಆದಿಲ್ ಎಂಬ ಬಾಲಕನ ಪೋಷಕರು, ಮಗನ ಸಾವಿನ ನೋವಿನ ನಡುವೆಯೂ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಹೃದಯದ ಕವಾಟಿನ ದೋಷದಿಂದಾಗಿ ಹೃದಯ ದಾನ ಮಾಡಲು ಸಾಧ್ಯವಾಗದಿದ್ದರೂ, ಆತನ ಮೂತ್ರಪಿಂಡ ಹಾಗೂ ಯಕೃತ್ತನ್ನು ದಾನ ಮಾಡುವ ಮೂಲಕ ಇತರರಿಗೆ ಮರುಜೀವ ನೀಡಲು ಪೋಷಕರು ಮುಂದಾಗಿದ್ದಾರೆ.
ಕೇರಳ: ಹೆತ್ತ ಮಗನನ್ನು ಕಳೆದುಕೊಂಡ ದುಃಖ ವರ್ಣನಾತೀತ. ಕೇರಳದ ಕೋಯಿಕ್ಕೋಡ್‌ನಲ್ಲಿ ಪೋಷಕರೊಬ್ಬರು ತಮ್ಮ ಮಗನ ಸಾವಿನ ನೋವಿನಲ್ಲೂ ಮತ್ತೊಬ್ಬರಿಗೆ ಜೀವ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಪಘಾತದಲ್ಲಿ ಮೃತಪಟ್ಟ 17 ವರ್ಷದ ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆತ ಇನ್ನೊಬ್ಬರ ರೂಪದಲ್ಲಿ ಜೀವಂತವಾಗಿರಲಿ ಎಂದು ಪೋಷಕರು ಆಶಿಸಿದ್ದಾರೆ.
ಘಟನೆಯ ಹಿನ್ನೆಲೆ
ಮೃತ ಬಾಲಕನನ್ನು ಮಲಪ್ಪುರಂ ಜಿಲ್ಲೆಯ ಪೆರಿಂತಲ್ಮಣ್ಣ ಮೂಲದ ಆದಿಲ್ (17) ಎಂದು ಗುರುತಿಸಲಾಗಿದೆ. ಆದಿಲ್ ಕ್ಯಾಟರಿಂಗ್ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ವಾಪಸ್ ಬರುತ್ತಿದ್ದಾಗ ಮನ್ನಾರ್ಮಲ ಎಂಬಲ್ಲಿ ಭೀಕರ ಅಪಘಾತಕ್ಕೀಡಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಮಗ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳುವುದು ಪೋಷಕರಿಗೆ ಅಸಾಧ್ಯವಾಗಿತ್ತು. ಈ ನೋವಿನಲ್ಲೂ ಅವರು ಒಂದು ಉದಾತ್ತ ನಿರ್ಧಾರ ಕೈಗೊಂಡರು. ನಮ್ಮ ಮಗ ನಮ್ಮನ್ನು ಬಿಟ್ಟು ಹೋಗಿದ್ದನ್ನು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅವನ ಅಂಗಾಂಗಗಳ ಮೂಲಕ ಕೆಲವು ರೋಗಿಗಳಾದರೂ ಬದುಕಲಿ ಎಂಬುದು ನಮ್ಮ ಆಸೆ. ಇದರಿಂದ ಅವನು ಎಲ್ಲೋ ಒಂದು ಕಡೆ ಜೀವಂತವಾಗಿದ್ದಾನೆ ಎಂಬ ಭಾವನೆ ನಮಗಿರುತ್ತದೆ ಎಂದು ಪೋಷಕರು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಆದಿಲ್‌ನ ಪೋಷಕರು ಮೊದಲು ಮಗನ ಹೃದಯವನ್ನು ದಾನ ಮಾಡಲು ಇಚ್ಛಿಸಿದ್ದರು. ಮಗನ ಹೃದಯ ಮತ್ತೊಬ್ಬರ ಎದೆಯಲ್ಲಿ ಬಡಿದುಕೊಳ್ಳಲಿ ಎಂಬುದು ಅವರ ಆಸೆಯಾಗಿತ್ತು. ಆದರೆ ವೈದ್ಯಕೀಯ ತಪಾಸಣೆಯ ವೇಳೆ ಬಾಲಕನ ಹೃದಯದಲ್ಲಿ ದೋಷವಿರುವುದು ಪತ್ತೆಯಾಯಿತು. ಈ ಕಾರಣದಿಂದ ಹೃದಯ ದಾನ ಮಾಡಲು ಸಾಧ್ಯವಾಗಲಿಲ್ಲ. ನಂತರ ಪೋಷಕರು ಆತನ ಮೂತ್ರಪಿಂಡ (Kidneys) ಮತ್ತು ಯಕೃತ್ತನ್ನು (Liver) ದಾನ ಮಾಡಲು ಒಪ್ಪಿಗೆ ನೀಡಿದರು.
ಸರ್ಕಾರಿ ಏಜೆನ್ಸಿಯಲ್ಲಿ ನೋಂದಾಯಿತರಾದ ಅರ್ಹ ಫಲಾನುಭವಿಗಳಿಗೆ ಆದಿಲ್‌ನ ಅಂಗಾಂಗಗಳನ್ನು ನೀಡಲಾಗಿದೆ. ತಮ್ಮ ಮಗನನ್ನು ಕಳೆದುಕೊಂಡ ಅತೀವ ನೋವಿನ ನಡುವೆಯೂ, ಇತರರ ಬದುಕಿಗೆ ಬೆಳಕಾದ ಪೋಷಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.


