ತಿರುವನಂತಪುರ[ಫೆ.18]: ಇನ್ನೇನು ಚಳಿಗಾಲ ಕಳೆಯಿತು ಎನ್ನುವ ಹಂತದಲ್ಲೇ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಕೇರಳದಲ್ಲಿ ತಾಪಮಾನದಲ್ಲಿ ದಿಢೀರ್‌ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನದಲ್ಲಿ 3 ಡಿ.ಸೆ.ವರೆಗೂ ಏರಿಕೆ ದಾಖಲಾಗುತ್ತಿದೆ. ಇಂಥ ಬೆಳವಣಿಗೆ ಕಳೆದ 30 ವರ್ಷಗಳಲ್ಲಿ ಇದೇ ಮೊದಲು. ಇದರ ಬೆನ್ನಲ್ಲೇ ಹವಮಾನ ಇಲಾಖೆಯ ಕೇರಳದ 6 ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಉಷ್ಣಾಂಶ ಸಾಮಾನ್ಯಕ್ಕಿಂತ 3 ಡಿ.ಸೆನಷ್ಟುಹೆಚ್ಚಿರಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಅದರ ಬೆನ್ನಲ್ಲೇ ಸೋಮವಾರ ತಿರುವನಂತಪುರದಲ್ಲಿ 34.9 ಡಿ.ಸೆ., ಆಲಪ್ಪುಳದಲ್ಲಿ 36.8 ಡಿ.ಸೆ., ಕೊಟ್ಟಾಯಂನಲ್ಲಿ 37.8 ಡಿ.ಸೆ., ಕಣ್ಣೂರಿನಲ್ಲಿ 37.2 ಡಿ.ಸೆನಷ್ಟುತಾಪಮಾನ ದಾಖಲಾಗಿದೆ.

ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಗರಗಳ ಪೈಕಿ ಒಂದಾದ ಪಾಲಕ್ಕಾಡ್‌ನಲ್ಲಿ 2 ದಿನಗಳ ಹಿಂದೆ 37.1 ಡಿ.ಸೆ.ನಷ್ಟುಉಷ್ಣಾಂಶ ದಾಖಲಾಗಿರುವುದು ಸ್ಥಳೀಯರನ್ನು ಹೈರಾಣಾಗಿಸಿದೆ.

ಪರಿಸರ ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಫೆಬ್ರುವರಿ ತಿಂಗಳ ಮೊದಲ 2 ವಾರದಲ್ಲೇ ಉಷ್ಣಾಂಶ ಈ ಮಟ್ಟಿಗೆ ಏರಿಕೆ ಕಂಡಿದೆ.

ತಿರುನವಂತಪುರ, ಆಲಪ್ಪುಳ, ಕೊಟ್ಟಾಯಂ, ತಿಶ್ಶೂರು, ಕಲ್ಲಿಕೋಟೆ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಉಷ್ಣಾಂಶ ಹೆಚ್ಚಿನ ಮಟ್ಟದಲ್ಲೇ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.