ನವದೆಹಲಿ[ನ.28]: ಪಾಕಿಸ್ತಾನದ ಬಾಲಾಕೋಟ್‌ ಭಯೋತ್ಪಾದಕ ಕ್ಯಾಂಪ್‌ಗಳ ಮೇಲೆ ಈ ವರ್ಷದ ಆರಂಭದಲ್ಲಿ ಭಾರತವು ಸರ್ಜಿಕಲ್‌ ದಾಳಿ ನಡೆಸಿ ಉಗ್ರರ ತಾಣಗಳನ್ನು ನಾಶಗೊಳಿಸಿತ್ತು. ಆದರೆ ಈ ಶಿಬಿರಗಳನ್ನು ಮರುಸ್ಥಾಪಿಸಲು ಮತ್ತೆ ಯತ್ನಗಳು ಆರಂಭವಾಗಿವೆ ಎಂಬ ಖಚಿತ ಮಾಹಿತಿಗಳು ಭಾರತ ಸರ್ಕಾರಕ್ಕೆ ಲಭಿಸಿವೆ.

ರಾಜ್ಯಸಭೆಗೆ ಬುಧವಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್‌ ರೆಡ್ಡಿ ಈ ವಿಷಯ ತಿಳಿಸಿ, ‘ಕೇಂದ್ರ ಸರ್ಕಾರವು ದೇಶದ ಗಡಿ ರಕ್ಷಿಸಿ ಸಾರ್ವಭೌಮತೆ ಹಾಗೂ ಏಕತೆ ಕಾಯ್ದುಕೊಳ್ಳುವ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.

‘ಪಾಕಿಸ್ತಾನ ಮೂಲದ ಭಯೀತ್ಪಾದಕ ಗುಂಪುಗಳು ಬಾಲಾಕೋಟ್‌ನಲ್ಲಿ ಉಗ್ರ ನೆಲೆ ಮರುಸ್ಥಾಪಿಸುವ ಯತ್ನ ಆರಂಭಿಸಿದ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ಅಲ್ಲಿ ಅವು ಭಾರತದ ವಿರುದ್ಧ ಜಿಹಾದಿ ಹಾಗೂ ಧಾರ್ಮಿಕ ಕೋರ್ಸುಗಳನ್ನು ಆರಂಭಿಸುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ’ ಎಂದರು.

ಆದರೆ ಸಂಭಾವ್ಯ ದಾಳಿಗಳನ್ನು ತಡೆಯಲು ಭಾರತ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಅನುಸರಿಸುತ್ತಿದೆ. ನಿರಂತರ ಕ್ರಮಗಳನ್ನು ಕಾಶ್ಮೀರದಲ್ಲಿ ಕೈಗೊಳ್ಳುತ್ತಿದೆ. ಇದರ ಪರಿಣಾಮ ಭಾರೀ ಸಂಖ್ಯೆಯ ಉಗ್ರವಾದಿಗಳು ಕಳೆದ ಕೆಲವು ವರ್ಷಗಳಲ್ಲಿ ಹತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.